ಬೆಂಗಳೂರು: ಲಾಕ್ಡೌನ್ ಘೋಷಣೆಯಾದ ದಿನದಿಂದ ಬಹುತೇಕ ಮಂದಿಗೆ ತಮ್ಮ ಜೀವನವನ್ನು ರೂಪಿಸಲು ಬಹಳಷ್ಟು ಸಮಸ್ಯೆಗಳು ಆಗಿದೆ. ಸಿಲಿಕಾನ್ ಸಿಟಿಗೆ ಉದ್ಯೋಗ ಅರಸಿ ಬೇರೆ ಬೇರೆ ರಾಜ್ಯ, ಹಳ್ಳಿಗಳಿಂದ ನಗರಕ್ಕೆ ಬಂದು ಹಲವರು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಅತಿಥಿ ಗೃಹಗಳನ್ನು ಅವಲಂಬಿಸಿದ್ದಾರೆ.
ಸದ್ಯ ಕೊರೊನಾ ಅನ್ನೋ ಮಹಾಮಾರಿ ಬಂದ ನಂತರ ಅನೇಕ ಮಂದಿ ಹೆದರಿ ಬೆಂಗಳೂರನ್ನು ಬಿಟ್ಟರೆ ಇನ್ನುಳಿದ ಕೆಲವರು ಪಿ.ಜಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರಿಗೆ ಪಿಜಿಗಳ ಮಾಲೀಕರು ಯಾವುದೇ ತೊಂದರೆ ನೀಡಬಾರದೆಂದು ಬಿಬಿಎಂಪಿ ಆಯುಕ್ತರು ಹಾಗೂ ನಗರ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪಿಜಿ ಹಾಗೂ ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವಾರ್ನಿಂಗ್ ನೀಡಲಾಗಿದೆ.
ಸದ್ಯ ಶಾಲಾ, ಕಾಲೇಜುಗಳಿಗೆ ರಜೆ ಇರುವ ವಿದ್ಯಾರ್ಥಿಗಳು ರಜೆ ತೆಗೆದುಕೊಂಡು ಹೋಗುವಂತೆ ಕೂಡ ಸೂಚಿಸಲಾಗಿತ್ತು. ಬಹುತೇಕ ಮಂದಿ ಕೊರೊನಾ ಮತ್ತು ಲಾಕ್ಡೌನ್ಗೆ ಹೆದರಿ ಅತಿಥಿಗೃಹಗಳನ್ನು ಬಿಟ್ಟು ತೆರಳಿದ್ದಾರೆ. ಆದರೆ, ತೆರಳುವಾಗ ಪಿಜಿಗಳಲ್ಲಿ ತಮ್ಮ ಲಗೇಜ್ಗಳನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಇತ್ತ ಪಿಜಿ ಮಾಲೀಕರು ತಿಂಗಳ ಬಾಡಿಗೆ ನೀಡುವಂತೆ ಕರೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಪಿಜಿಯಲ್ಲಿ ವಾಸಿಸುವ ಹಾಗೂ ಹೆಸರು ಹೇಳಲು ಇಚ್ಛಿಸದವರೊಬ್ಬರು ''ಕೊರೊನಾದಿಂದ ದೊಡ್ಡ ಸಮಸ್ಯೆಯಾಗಿದೆ. ಕೊರೊನಾದಿಂದಾಗಿ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದು, ಸರ್ಕಾರ ಕೂಡ ಸ್ವಲ್ಪ ಸಹಾಯ ಮಾಡಿದೆ. ಆದರೆ, ಇದರ ಮಧ್ಯೆ ಪಿಜಿ ನಡೆಸುವವರು ತಿಂಗಳ ಬಾಡಿಗೆ ಕೇಳುತ್ತಿದ್ದಾರೆ. ನಿಮ್ಮ ಲಗೇಜ್ಗಳು ಇಲ್ಲಿದ್ದು, ಬಾಡಿಗೆ ಹಣ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಮನೆಯವರೂ ಕೂಡಾ ಸಂಕಷ್ಟದಲ್ಲಿದ್ದಾರೆ. ಇದು ಬೆಂಗಳೂರಿಗೆ ಬಂದ ಬಹುತೇಕ ಮಂದಿಯ ಸಮಸ್ಯೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಹಾಯ ಮಾಡಿ'' ಎಂದು ಅಂಗಲಾಚಿದ್ದಾರೆ.