ಬೆಂಗಳೂರು: ಸಚಿವ ಸ್ಥಾನ ಬಿಡೋದು ತ್ಯಾಗವೂ ಅಲ್ಲ ಬಲಿದಾನವೂ ಅಲ್ಲ. ಪಕ್ಷದಲ್ಲಿ ಎಲ್ಲ ಜವಾಬ್ದಾರಿಗಳೂ ಅನಿವಾರ್ಯ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.
ವಿಧಾನಸೌಧಲ್ಲಿ ಮಾತನಾಡಿದ ಅವರು, ಮಂತ್ರಿಮಂಡಲ ವಿಸ್ತರಣೆ ಆದ್ರು ಸರಿ, ಪುನಾರಚನೆ ಆದ್ರು ಸರಿ. ನಮಗೆ ಕಾರ್ಯಕರ್ತ ಎನ್ನುವ ಸ್ಥಾನ ಖಾಯಂ. ಪಕ್ಷ ಏನೆ ಜವಬ್ದಾರಿ ನೀಡಿದ್ರು ಸರಿ. ಕುರ್ಚಿ ಬಿಡೋದು ಹಿಡಿಯೋದು ಎಲ್ಲಾ ತ್ಯಾಗ ಬಲಿದಾನ ಅಲ್ಲ. ತ್ಯಾಗ ಬಲಿದಾನಕ್ಕೆ ದೊಡ್ಡ ಹೆಸರಿದೆ. ಸೈನಿಕರ ಜೀವನ ತ್ಯಾಗ ಬಲಿದಾನದ್ದು, ನಮ್ದೆಲ್ಲಾ ಯಾವಾಗ ಬೇಕಾದರೂ ಅಧಿಕಾರ ಇರತ್ತೆ ಹೋಗತ್ತೆ. ಮೊಮ್ಮಗನಿಗೆ ಸೀಟು ಬಿಟ್ಟುಕೊಟ್ಟು ದೇವಗೌಡರು ತ್ಯಾಗ ಅಂದಿದ್ರು, ಅದೆಲ್ಲಾ ಹೇಗೆ ತ್ಯಾಗ ಆಗೋಕೆ ಸಾಧ್ಯ ಎಂದು ತಿಳಿಸಿದರು.
ಸರಳ ಮೈಸೂರು ದಸರಾ:
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮೊನ್ನೆಯ ಸಚಿವ ಸಂಪುಟದಲ್ಲಿ ಸರಳ ದಸರಾ ಆಚರಣೆ ಬಗ್ಗೆ ಚರ್ಚೆ ನಡೆದಿದೆ. ಸಂಪ್ರದಾಯ ಬಿಡಲ್ಲ, ವೈಭವ ಇರಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಆ ಬಳಿಕ ಮೈಸೂರು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಫೋನ್ ಟ್ಯಾಪಿಂಗ್ ಮಾಡಿಲ್ಲ:
ಸ್ವಾಮೀಜಿಗಳು ಸೇರಿದಂತೆ ಹಲವರದ್ದು ಅವರು ಫೋನ್ ಟ್ಯಾಪಿಂಗ್ ಮಾಡಿದ್ದರು. ತಾವು ಮಾಡ್ತಿರೋದ್ದನ್ನೇ ಈಗ ಮಾಡ್ತಾರೇ ಅನ್ನುವಂತಾಗಿದೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಬಿಜೆಪಿ ಸರ್ಕಾರ. ಸಾರ್ವಜನಿಕರ ಜೀವನದಲ್ಲಿರೋರಿಗೆ ಒಳಗೊಂದು, ಹೊರಗೊಂದು ಇರಲ್ಲ. ಕೆಲವರು ಪ್ರಚಾರಕ್ಕೆ ಕೆಲವೊಮ್ಮೆ ಆರೋಪ ಮಾಡ್ತಾರೆ ಎಂದು ಡಿಕೆಶಿಗೆ ಟಾಂಗ್ ನೀಡಿದರು.
ಡಿಕೆಶಿ ಮುಚ್ಚಿಡುವಂತಹ ವ್ಯವಹಾರ ಏನಿದೆ. ಅಂತಹ ವ್ಯವಹಾರ ಇರುವುದಕ್ಕೆ ಅವರು ಭಯ ಪಡುತ್ತಾರೆ. ಕಾಂಗ್ರೆಸ್ ತಮ್ಮ ಅವಧಿಯಲ್ಲಿ ಈ ರೀತಿ ಕೆಲಸ ಮಾಡುತ್ತಿದ್ದರು. ಹೀಗಾಗಿ ನಾವು ಕೂಡ ಇದೇ ರೀತಿ ಮಾಡುತ್ತಿದ್ದೇವೆ ಅಂತ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವಕ್ಕೆ ಜೋತು ಬೀಳುವುದು ಅವರ ಕರ್ಮ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಂಶಪಾರಂಪರ್ಯಕ್ಕೆ ಜೋತು ಬೀಳೋದು ಅವರ ಕರ್ಮ, ಹಣೆಬರಹ, ದೌರ್ಭಾಗ್ಯ ಎಂದು ಕಿಡಿ ಕಾರಿದರು. ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿದ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ದೇಶದ ಕರ್ಮ ಆಗಬಾರದು ಅನ್ನೋದಷ್ಟೇ ನಮ್ಮ ಕಳಕಳಿ ಎಂದರು.
ಆಂತರಿಕ ಮೌಲ್ಯಮಾಪನ ಒಳ್ಳೆಯದು:
ಸಚಿವರ ಮೌಲ್ಯಮಾಪನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಸಚಿವರ ಆಂತರಿಕ ಮೌಲ್ಯಮಾಪನ ಒಳ್ಳೆಯದು. ಪಕ್ಷದಲ್ಲಿ ಮೌಲ್ಯಮಾಪನ ಮಾಡುವ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ನನಗೆ ನಾನೇ ಮೌಲ್ಯಮಾಪನ ಮಾಡುತ್ತೇನೆ. ಅದನ್ನು ಜನರ ಮುಂದೆ ಇಡ್ತೇನೆ ಎಂದರು.
ಇದೇ ವೇಳೆ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಋಣಾತ್ಮಕ ರಾಜಕಾರಣವನ್ನ ಧನಾತ್ಮಕದೆಡೆಗೆ ಕೊಂಡೊಯ್ತಾರೆ ಎಂದು ವಿವರಿಸಿದರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ನಾನು ಅತ್ಯಂತ ಹತ್ತಿರದಿಂದ ಅವರನ್ನು ನೋಡಿದ್ದೇನೆ. ತಮಿಳುನಾಡಿನ ರಾಜಕಾರಣ ಬದಲಾಯಿಸುವ ನಂಬಿಕೆ ಇದೆ. ಸಾಕಷ್ಟು ಬದಲಾವಣೆ ನಿರೀಕ್ಷೆ ಇದೆ ಎಂದರು.