ಬೆಂಗಳೂರು: ಕುಡಿಯುವ ನೀರಿಗಾಗಿ ಹೋರಾಡುತ್ತಿರುವ ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವ ರಾಜ್ಯಸರ್ಕಾರಕ್ಕೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ಹಾಗೂ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು, ಈ ಸಂದರ್ಭ ಬೆಂಗಳೂರಿನಲ್ಲಿ ಈಟಿವಿ ಭಾರತ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಮೇಕೆದಾಟು ಯೋಜನೆ ಹೋರಾಟ ಸಂಬಂಧಿ ಪಾದಯಾತ್ರೆ ಎರಡನೇ ಹಂತದ ನಡಿಗೆ ಆರಂಭವಾಗಿದೆ. ರಾಜ್ಯ ಸರ್ಕಾರ ನಮ್ಮ ಪಾದಯಾತ್ರೆ ತಡೆಗಟ್ಟಲು ಏನೆಲ್ಲಾ ಪ್ರಯತ್ನ ಮಾಡಬೇಕು ಅದನ್ನೇ ಮಾಡುತ್ತಿದೆ. ನಮ್ಮವರ ಮೇಲೆ ಈಗಾಗಲೇ ಐದಾರು ಕೇಸುಗಳನ್ನು ದಾಖಲಿಸಲಾಗಿದೆ. ನಿನ್ನೆಯೂ ಕೇಸುಗಳು ದಾಖಲಾಗಿವೆ. ನಾವು ಪಕ್ಷಾತೀತವಾಗಿ ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಎರಡುವರೆ ವರ್ಷವಾದರೂ ಸಹ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿಲ್ಲ. ಜಾರಿಗೆ ತರುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ. ಮೊದಲ ಹಂತದ ಪಾದಯಾತ್ರೆ ನಡೆಸಿ ಕೋವಿಡ್ ನಿರ್ಬಂಧದ ಹಿನ್ನೆಲೆ ನಿಲ್ಲಿಸಿದ್ದೆವು. ಇದೀಗ ಎರಡನೇ ಹಂತ ಆರಂಭಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರದ ಮಂತ್ರಿಗಳು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಇದಕ್ಕೆ ಜನರೇ ಸರಿಯಾದ ಸಂದರ್ಭದಲ್ಲಿ ಸೂಕ್ತ ಉತ್ತರ ಕೊಡುತ್ತಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಯೋಜನೆಯನ್ನು ಜಾರಿಗೆ ತರಬೇಕಾದ ಜವಾಬ್ದಾರಿ ಅವುಗಳ ಮೇಲೆ ಇತ್ತು. ಆದರೆ ಮೂರು ವರ್ಷ ಕಳೆದರೂ ಇದುವರೆಗೂ ಜಾರಿಗೆ ತಂದಿಲ್ಲ. ಒಂದು ಮಹತ್ವದ ನೀರಾವರಿ ಯೋಜನೆ ಬಗ್ಗೆ ಚಿಂತನೆ ಮಾಡಿದ ನಿರ್ಜೀವ ಸರ್ಕಾರ ಇದಾಗಿದೆ. 25 ಸಂಸದರು ಹಾಗೂ ಕೇಂದ್ರ ಸಚಿವರು ಇದ್ದರೂ ಸಹ ಯೋಜನೆಗೆ ಕೇವಲ ಪರಿಸರ ಇಲಾಖೆಯ ಅನುಮತಿ ಪಡೆಯಲು ಸಾಧ್ಯವಾಗಿಲ್ಲ. ಪರವಾನಗಿ ಪಡೆಯುವ ಶಕ್ತಿ ಸರ್ಕಾರಕ್ಕೆ ಸಚಿವರಿಗೆ ಹಾಗೂ ಸಂಸದರಿಗೆ ಇಲ್ಲ. ಹಿನ್ನೆಲೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಕುಡಿಯುವ ನೀರಿಗಾಗಿ ಈ ಹೋರಾಟ: ಕುಡಿಯುವ ನೀರಿಗಾಗಿ ಹಾಗೂ ಈ ಭಾಗದ ಜನರ ನೀರಾವರಿ ಸೌಕರ್ಯಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಸರ್ಕಾರ ಈಗಲಾದರೂ ಮಣಿದು ಯೋಜನೆ ಜಾರಿಗೆ ಮನಸ್ಸು ಮಾಡಬೇಕು ಎಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದೇವೆ. ನಾವು ಇಷ್ಟು ಹೇಳಿದ ನಂತರವೂ ಬಜೆಟ್ನಲ್ಲಿ ನವರು ಅನುದಾನ ಮೀಸಲಿಡಲಿಲ್ಲ ಎಂದಾದರೆ ಸರ್ಕಾರಕ್ಕೆ ಬದ್ಧತೆ ಇಲ್ಲ ಎಂದು ಹೇಳಬೇಕಾಗುತ್ತದೆ. ಇಡೀ ರಾಜ್ಯದ ಜನತೆ ಪಕ್ಷಾತೀತವಾಗಿ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಮ್ಮ ಹೋರಾಟವನ್ನು ಬೆಂಬಲಿಸಿ ಸ್ವಾಮೀಜಿಗಳು ಸಹ ಸಹಮತ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಪರಿಸರ ಇಲಾಖೆ ಪರವಾನಗಿ ಅಗತ್ಯವಿದ್ದು ಅದನ್ನು ಪಡೆಯುವ ಮೂಲಕ ಆದಷ್ಟು ಬೇಗ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ನಲ್ಲಿ ನಮ್ಮ ನಿಲುವು ಸಹ ಯೋಜನೆಗೆ ಹಣ ಮೀಸಲಿಡಬೇಕು ಎಂಬುದೇ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣವನ್ನು ನೀಡಬೇಕು ಮೇಕೆದಾಟು ಮಾತ್ರವಲ್ಲ ಮಹದಾಯಿ ಯೋಜನೆಗೂ ಹಣ ಮೀಸಲಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಈ ಪಾದಯಾತ್ರೆಗೆ ಎಲ್ಲಾ ಸಂಘಟನೆಗಳು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿವೆ. ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಕರೆಕೊಟ್ಟ ಹೋರಾಟಕ್ಕೆ ಅಭೂತಪೂರ್ವ ಯಶಸ್ಸನ್ನು ತಂದು ಕೊಡುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ನೀಡಬೇಕು. ಇಲ್ಲವಾದರೆ ನಾವು ಉಗ್ರ ಹೋರಾಟವನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.
ಓದಿ : ನಮಗೆ ಯಾರೂ ಸಹಾಯ ಮಾಡ್ತಿಲ್ಲ.. ಉಕ್ರೇನ್ನಲ್ಲಿರುವ ವಿದ್ಯಾರ್ಥಿನಿಯ ವಿಡಿಯೋ ವೈರಲ್