ಬೆಂಗಳೂರು : ಲಾಕ್ಡೌನ್ ಮಾಡಲಾಗಿದ್ದು, ಈಗ ಅನುಮತಿ ಪಡೆದು ಮಾತ್ರ ಓಡಾಡಬೇಕು. ಆದರೆ, ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ನಂಜನಗೂಡು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ. ಇದು ಹೇಗೆ ಸಾಧ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್ ಪ್ರಶ್ನಿಸಿದ್ದಾರೆ.
ಓದಿ: ಮದುವೆಯಾಗು ಎಂದು ಪೀಡಿಸಿದ ಪ್ರಿಯತಮೆಯ ಕತ್ತು ಕೊಯ್ದ ಪ್ರಿಯತಮ!
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪತ್ತು ನಿರ್ವಹಣೆ ಜಾರಿಯಿದೆ. ಸಿಎಂ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಇದು ವಿಪತ್ತು ನಿರ್ವಹಣೆ ಕಾಯ್ದೆಯ ಉಲ್ಲಂಘನೆ ಆಗುತ್ತದೆ. ಸೆಕ್ಷನ್ 51 ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ ಪ್ರಕಾರ ಶಿಕ್ಷೆ ಆಗಬೇಕು. ಸೆಕ್ಷನ್ 52 ಹಾಗೂ 53 ಉಲ್ಲಂಘನೆ ಆಗಿದೆ ಎಂದಿದ್ದಾರೆ.
ವಿಜಯೇಂದ್ರ ಅವರೇ ಫೋಟೋ ಹಾಕಿದ್ದು, ಅದರಲ್ಲಿ ಯಾರೂ ಕೂಡ ಸಾಮಾಜಿಕ ಅಂತರ ಕಾಪಾಡಿಲ್ಲ. ಜನಸಾಮಾನ್ಯರಿಗೆ ಒಂದು ಕಾನೂನು, ಸಿಎಂ ಪುತ್ರನಿಗೆ ಒಂದು ಕಾನೂನಾ? ಇಲ್ಲಿ ಎಲ್ಲರಿಗೂ ಒಂದೇ ಕಾನೂನು. ಕೂಡಲೇ ವಿಜಯೇಂದ್ರ ವಿರುದ್ದ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಅನ್ವಯ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆಕ್ಸಿಜನ್ ಕೊರತೆಯಿಂದ 36 ಜನ ಚಾಮರಾಜನಗರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಚಾಮರಾಜನಗರದ ಡಿಸಿ ಮುಂಚೆಯೇ ಆಕ್ಸಿಜನ್ ಕೊರತೆ ಬಗ್ಗೆ ಮಾಹಿತಿ ನೀಡಿದ್ದರು.
ಇದನ್ನು ಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಆದರೆ, ಸುರೇಶ್‌ಕುಮಾರ್ ಫೋನ್ ರಿಸೀವ್ ಮಾಡಲಿಲ್ಲ. ಚಾಮರಾಜನಗರದ ದುರಂತದ ಬಳಿಕ, ಮಾಧ್ಯಮಗಳಲ್ಲಿ ಈ ವಿಚಾರ ಬೆಳಕಿಗೆ ಬಂದ ಮೇಲೆ ರಾಜ್ಯ ಉಚ್ಚ ನ್ಯಾಯಾಲಯ ತನಿಖಾ ತಂಡವನ್ನು ರಚಿಸಿತು. ಈ ತಂಡದ ವರದಿ ಪ್ರಕಾರ ಸರ್ಕಾರದ ಬೇಜವಾಬ್ದಾರಿ ಕಾಣುತ್ತಿದೆ.
ಮೃತರಿಗೆ ಸರ್ಕಾರ ಎರಡು ಲಕ್ಷ ಪರಿಹಾರ ನೀಡಲು ಘೋಷಣೆ ಮಾಡಿದೆ. ಇದೊಂದು ಭಿಕ್ಷೆ ರೀತಿಯಲ್ಲಿ ನೀಡಲಾಗುತ್ತಿದೆ. ಆಂಧ್ರದಲ್ಲಿ ಆಕ್ಸಿಜನ್ ಕೊರತೆಯಿಂದ ಸತ್ತವರಿಗೆ ಹತ್ತು ಲಕ್ಷ ಪರಿಹಾರ ನೀಡಲಾಗ್ತಿದೆ.
ಈ ದುರಂತ ನಡೆದು ಇಷ್ಟು ದಿನಗಳಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆರೋಗ್ಯ ಸಚಿವರನ್ನು ಕೂಡಲೇ ವಜಾ ಮಾಡಬೇಕು. ಈ ಸಾವಿಗೆ ಕಾರಣರಾದವರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಏನು ಮಾಡಿದೆ..?
ಪರಿಷತ್ ಸದಸ್ಯ ನಜೀರ್ ಅಹಮದ್ ಮಾತನಾಡಿ, ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಒಂದು ಭೋಗಸ್. ಕಳೆದ ಬಾರಿ ಘೋಷಣೆ ಮಾಡಿರುವ ಪ್ಯಾಕೇಜ್ ಜನರಿಗೆ ಸರಿಯಾಗಿ ತಲುಪಿಲ್ಲ.
ತಮಿಳುನಾಡು, ಕೇರಳದಲ್ಲಿ ಪರಿಹಾರದ ಪ್ಯಾಕೇಜ್ ಮನೆ ಮನೆಗೆ ತಲುಪುತ್ತಿದೆ. ವಾರಿಯರ್ಸ್ ಅಂತ ಹೆಸರಿಗಷ್ಟೇ ಸರ್ಕಾರ ಹೇಳುತ್ತೆ. ಅಂತಹವರ ಕುಟುಂಬದಲ್ಲೇ ಎಷ್ಟೋ ಜನ ಕೋವಿಡ್‌ಗೆ ಬಲಿಯಾಗಿದ್ದಾರೆ. ಅಂತಹವರಿಗೆ ಸರ್ಕಾರ ಏನು ಮಾಡಿದೆ? ಎಂದು ಕೇಳಿದರು.
ನಾಲಾಯಕ್ ಸಚಿವರನ್ನು ಕೂಡಲೇ ತೆಗೆದುಹಾಕಬೇಕು:
ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ಇಡೀ ರಾಜ್ಯ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಅರೆಕಾಸಿನ ಮಜ್ಜಿಗೆಯಂತೆ.
ಯಡಿಯೂರಪ್ಪ ಮತ್ತು 25 ಸಂಸದರು ಕೇಂದ್ರದ ವಿರುದ್ದ ಗಟ್ಟಿ ದನಿಯಲ್ಲಿ ಮಾತಾಡ್ತಿಲ್ಲ. ಇದೊಂದು ಷಂಡ ಸರ್ಕಾರ, ಷಂಡ ಸಂಸದರು ಎಂದು ಜನ ಮಾತಾಡಿಕೊಳ್ತಾ ಇದಾರೆ.
ಆರೋಗ್ಯ ಸಚಿವ ಸುಧಾಕರ್, ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ್ ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ಕೊಡ್ತಾ ಇದಾರೆ. ಸಚಿವರ ನಡುವೆ ಸಮನ್ವಯದ ಕೊರತೆ ಇದೆ. ಈ ಸಚಿವರುಗಳನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು. ಇಬ್ಬರು ನಾಲಾಯಕ್ ಸಚಿವರನ್ನು ಕೂಡಲೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.