ಬೆಂಗಳೂರು: ರೇಪ್ ಅನ್ನೋ ಪದ ಗೃಹ ಸಚಿವರಿಗೆ ಪ್ರಿಯವಾದ ಪದ. ಆ ಪದವನ್ನ ಗೌರವದಿಂದ ಕಾಣ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಂ ಮಿನಿಸ್ಟರ್ ಹೊಸದಾಗಿ ಆಗಿದ್ದಾರೆ. ಕಾಂಗ್ರೆಸ್ ನವರು ನನ್ನನ್ನ ರೇಪ್ ಮಾಡ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನವರು ಅವರನ್ನ ರೇಪ್ ಮಾಡಿದ್ದೀವಂತೆ. ಕಾಂಗ್ರೆಸ್ ರೇಪ್ ಮಾಡ್ತಿದೆ ಅಂತ ಹೇಳಿದ್ರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.
ಹೋಂ ಮಿನಿಸ್ಟರ್ ಅವರನ್ನ ಯಾರು ರೇಪ್ ಮಾಡ್ತಿದ್ದಾರೋ ಪತ್ತೆ ಮಾಡಿ, ಡಿಜಿಯವರು ಆರೋಪಿಗಳನ್ನು ಬಂಧಿಸಬೇಕು. ಉಗ್ರಪ್ಪ, ರೇವಣ್ಣ, ಸಿದ್ದರಾಮಯ್ಯ ಯಾರು ಮಾಡಿದ್ರೂ ಬಂಧಿಸಲಿ. ನಾನು ಕಣ್ಣಿಂದ ನೋಡಿ, ಕೇಳಿದ್ದೇನೆ. ಹೋಂ ಮಿನಿಸ್ಟರ್ ಅವರನ್ನ ರೇಪ್ ಮಾಡಿದ್ರೆ ಬಂಧಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್ನಿಂದ ಸಮಿತಿ ರಚನೆ:
ಪೋಲೀಸರಿಗೆ ನಾನು ಮೊದಲೇ ಸಲಹೆ ನೀಡಿದ್ದೆ, ರಾಜಕೀಯ ಒತ್ತಡಕ್ಕೆ ಮಣಿಯಬೇಡಿ ಎಂದಿದ್ದೆ. ಮೈಸೂರಿನಲ್ಲಿ ನಡೆದಿರುವ ಘಟನೆ ಖಂಡನೀಯ. ಈ ಸರ್ಕಾರ ಪರ್ಮನೆಂಟ್ ಇಲ್ಲ ಅನ್ನೋದು ಗೊತ್ತಿದೆ. ನಾವು ಪ್ರತಿಪಕ್ಷದವರು. ಈಗ ಬೇಕಾದಷ್ಟು ಸೆಕ್ಷನ್ ಗಳಿವೆ. ಅದನ್ನ ರೇಪ್ ಮಾಡಿರೋ ಕಾಂಗ್ರೆಸ್ನವರ ಮೇಲೆ ಹಾಕಿಕೊಳ್ಳಲಿ ಎಂದರು. ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಈ ತಂಡ ಮೈಸೂರಿಗೆ ಹೋಗಲಿದೆ. ಅಲ್ಲಿನ ವಾಸ್ತವ ಸ್ಥಿತಿಯನ್ನ ಅರಿಯಲಿದೆ. ರಾಜ್ಯದ ಜನರಿಗೆ ಮಾಹಿತಿಯನ್ನ ನೀಡಲಿದೆ. ನಮಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಈ ಸಮಿತಿಯನ್ನ ರಚನೆ ಮಾಡಿದ್ದೇವೆ ಎಂದರು.
ಸತ್ಯ ಶೋಧನೆ ಮಾಡೇ ಮಾಡ್ತೇವಿ
ಸೈಬರ್ ಕ್ರೈಂ ಟೆಲಿಫೋನ್ ಟವರ್ ಎಲ್ಲವೂ ಇದೆ. ಚಾಮುಂಡಿಬೆಟ್ಟದಡಿ ಟವರ್ ಇದೆ. ಎಷ್ಟು ಪೋನ್ ಸಂಭಾಷಣೆ ಆಗಿದೆ ಟ್ರೇಸ್ ಮಾಡಬಹುದು. ಪೊಲೀಸರು ಒಂದು ಗಂಟೆಯಲ್ಲಿ ಟ್ರೇಸ್ ಮಾಡಬಹುದು. 48 ಗಂಟೆಯೇನು ದೊಡ್ಡದೇನಲ್ಲ. ಅಲ್ಲಿ ಸುತ್ತಮುತ್ತ ಇದ್ದವರನ್ನ ಟ್ರೇಸ್ ಮಾಡಬಹುದು. ಪೊಲೀಸರು ಪ್ರಕರಣ ಮುಚ್ಚಿದ್ರೂ ನಾವು ಬಿಡಲ್ಲ. ಸತ್ಯವನ್ನ ಶೋಧನೆ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಪೋಲಿಸ್ ಆಡಳಿತವನ್ನ ಇಡಿ ವಿಶ್ವ ನಮ್ಮನ್ನ ನೋಡ್ತಾ ಇದೆ. ಹಿಂದೆ ಪೋಲಿಸರಿಗೆ ನಿಮ್ಮ ಗೌರವ ಕಳೆದುಕೊಳ್ಳಬೇಡಿ, ರಾಜಕೀಯ ಒತ್ತಡದ ಬಗ್ಗೆ ಚಿಂತಿಸಬೇಡಿ ಎಂದಿದ್ದೆ. ರಾಜಕಾರಣಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಈಗಿನ ಗೃಹ ಸಚಿವರ ಕ್ಷೇತ್ರದಲ್ಲೂ ಅತ್ಯಾಚಾರ ನಡೆದಿದೆ. ಮೈಸೂರಿನ ಘಟನೆ ನಡೆದು 48ಗಂಟೆ ಆಗಿದೆ. ಇಂದು ರಾಷ್ಟ್ರೀಯ ಮಾಧ್ಯಮ ಗಳು ಕೂಡ ಇದನ್ನ ಕವರ್ ಮಾಡಿವೆ. ಇಂತಹ ದೊಡ್ಡ ನೀಚ ಸಂಸ್ಕೃತಿಗೆ ಸರ್ಕಾರ ರಾಜ್ಯವನ್ನ ಕೊಂಡೊಯ್ಯತ್ತಿದೆ.
ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಇನ್ನೂ ಒಬ್ಬರನ್ನೂ ಬಂಧಿಸಿಲ್ಲ. ಈಗ ಅವರಿಗೆ ಸಹಕಾರ ಕೊಡಬೇಕಂತೆ. ಏನ್ ಸಹಕಾರ ಕೊಡೋದು. ಇಟ್ ಇಸ್ ಎ ಶೇಮ್ ಆನ್ ಹೋಮ್ ಡಿಪಾರ್ಟ್ ಮೆಂಟ್. ನಮಗೆ ರಾಜ್ಯದ ಇಮೇಜ್ ಬಗ್ಗೆ ಕಳಕಳಿ ಇದೆ. ಇವರು ಇರ್ತಾರೆ ನಾಳೆ ಹೋಗ್ತಾರೆ ಎಂದರು.