ಬೆಂಗಳೂರು: ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಪಕ್ಷ ನನ್ನನ್ನ ನೇಮಿಸಿದೆ. ಮೇ 31ಕ್ಕೆ ಪದಗ್ರಹಣ ಸಮಾರಂಭ ನಡೆಸಲು ತೀರ್ಮಾನಿಸಿದ್ದೆ. ಆದ್ರೆ, ಅನಿವಾರ್ಯ ಕಾರಣಗಳಿಂದ ಮುಂದೂಡಿದ್ದು, ಮುಂದಿನ ದಿನಾಂಕ ತಿಳಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈಗ ಸಾಂಕೇತಿಕವಾಗಿ ಪದಗ್ರಹಣ ಮಾಡಬೇಕಿದೆ, ನಿಗದಿಯಂತೆ ಮೇ 31 ರಂದು ಕಾರ್ಯಕ್ರಮ ನಡೆಯಬೇಕಿತ್ತು. ಭಾನುವಾರ ಟ್ರಾಫಿಕ್ ಕಡಿಮೆ ಅಂತ ನಿರ್ಧರಿಸಿದ್ದೆ. ಆದರೆ ಭಾನುವಾರ ಕರ್ಫ್ಯೂ ಅಂತ ಹೇಳಿ ಬಿಟ್ಟಿದ್ದಾರೆ. ಹೀಗಾಗಿ ನಾನು ಬೇರೊಂದು ದಿನ ಅಧಿಕಾರ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಕೋವಿಡ್-19 ನಿಂದಾಗಿ ನಮಗೆ ಆಭಾಗ್ಯ ಸಿಕ್ಕಿರಲಿಲ್ಲ. ನಾವು ರಸ್ತೆಗಿಳಿದು ಪ್ರತಿಪಕ್ಷವಾಗಿ ವರ್ತಿಸಿದ್ದೇವೆ. ಜನರ ಮಧ್ಯೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇವೆ. ಅಧಿಕಾರ ಸ್ವೀಕರಿಸುವ ದಿನ ಎಲ್ಲಾ ಕಡೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಉದ್ದಗಲಕ್ಕೂ ಜ್ಯೋತಿ ಹಚ್ಚುವ ಕಾರ್ಯಕ್ರಮ ಮಾಡ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಸಂವಿಧಾನದ ಪೀಠಿಕೆ ಓದಿ ಅಧಿಕಾರ ಸ್ವೀಕರಿಸುತ್ತೇನೆ. ಹೀಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ವಿವರಿಸಿದರು.
ಅಧಿಕಾರ ದುರುಪಯೋಗ:
ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಯಾವುದೇ ಜನಪರ ಕಾರ್ಯಕ್ರಮ ಮಾಡಲಿಲ್ಲ. ಕೇಂದ್ರ 21 ಲಕ್ಷ ಕೋಟಿ ರೂ. ಘೋಷಿಸಿದೆ. ಆದರೆ ಎಲ್ಲಿಯೂ ನೆರವು ಘೋಷಿಸಿಲ್ಲ. ಇತ್ತ ಸಿಎಂ 1600 ಕೋಟಿ ರೂಪಾಯಿ ಘೋಷಣೆ ಮಾಡಿದ್ದರೂ, ಈವರೆಗೆ ಒಂದು ರೂಪಾಯಿ ಸಹ ಯಾರಿಗೂ ಸಿಕ್ಕಿಲ್ಲ. ದೇಶ ಕಟ್ಟುವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗ್ತಿರಲಿಲ್ಲ. ಇವತ್ತು ಅವರು ಊರಿಗೆ ವಾಪಸ್ ಹೋಗುವಂತೆ ಮಾಡಿದ್ದೀರಿ ಎಂದು ಡಿಕೆಶಿ ಹರಿಹಾಯ್ದರು.
ಎಲ್ಲಾ ವರ್ಗ, ಎಲ್ಲಾ ಧರ್ಮದ ಜನರನ್ನ ಭೇಟಿ ಮಾಡ್ತೇನೆ. ಯಾವ ವರ್ಗಕ್ಕೆ ನೋವು ಮಾಡಿದ್ದೀರ ಅವರಿಗೂ ಶಕ್ತಿ ತುಂಬುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು. ಪ್ರತಿ ಕ್ಷೇತ್ರದ ವಿಚಾರವನ್ನೂ ಗೌಪ್ಯವಾಗಿ ಪಡೆದುಕೊಳ್ತೇವೆ. ನಂತರ ಜನರ ಧ್ಚನಿಯಾಗಿ ಕೆಲಸ ಮಾಡ್ತೇವೆ. ಲಾಕ್ ಡೌನ್ ಸಡಿಲಿಕೆಯಿಂದ ಸೋಂಕು ಹೆಚ್ಚಳ ವಿಚಾರ ಮಾತನಾಡಿ, ಕೇಂದ್ರದ ವಿರುದ್ಧವಾಗಿ ಮಾರ್ಗಸೂಚಿ ಮಾಡ್ತಾರೆ. ಬೆಳಗ್ಗೆ ಸಚಿವರು ಒಂದು ರೀತಿ, ಅಧಿಕಾರಿಗಳು ಒಂದು ರೀತಿ ಹೇಳ್ತಾರೆ. ಅವರಿಗೆ ಜವಾಬ್ದಾರಿ ನಿಭಾಯಿಸೋಕೆ ಬರ್ತಿಲ್ಲ ಎಂದು ಟೀಕಿಸಿದರು.
ಕೇಂದ್ರ, ರಾಜ್ಯ ಸರ್ಕಾರ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಒಬ್ಬೊಬ್ಬರದೂ ಒಂದೊಂದು ನಿರ್ಧಾರವಿದೆ. ಎಲ್ಲಾ ದಿನಗಳು ಬೇರೆ, ಸಂಡೇ ಬೇರೆನಾ? ಭಾನುವಾರವೇ ಯಾಕೆ ಎಂದು ಸಿಎಂ ನಿರ್ಧಾರಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.