ಬೆಂಗಳೂರು: ಇಫ್ತಿಯಾರ್ ಕೂಟದಲ್ಲಿ ಸರ್ವ ಧರ್ಮದ ಮುಖಂಡರು ಹಾಗೂ ಧಾರ್ಮಿಕ ನಾಯಕರು ಭಾಗವಹಿಸಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಲು ಬದ್ಧವಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ರಂಜಾನ್ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಫ್ತಿಯಾರ್ ಕೂಟ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಸೌಹಾರ್ದ ಇಫ್ತಿಯಾರ್ ಕೂಟದಲ್ಲಿ ಸರ್ವ ಧರ್ಮದ ಮುಖಂಡರು ಹಾಗೂ ಧಾರ್ಮಿಕ ನಾಯಕರು ಭಾಗವಹಿಸಿದ್ದಾರೆ. ಬಹಳ ಶಾಂತಿಯಿಂದ ತಮ್ಮ ತಮ್ಮ ಧರ್ಮದ ಪ್ರಾರ್ಥನೆಯನ್ನು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಲು ಬದ್ಧವಾಗಿದೆ. ಎಲ್ಲ ಧರ್ಮದವರಿಗೂ ಸಹಾಯ ಮಾಡಬೇಕು. ಒಳ್ಳೆಯದನ್ನೇ ಮಾಡಬೇಕು ಎಂಬ ಆಶಯ ನಮ್ಮದಾಗಿದೆ. ನಾವೆಲ್ಲರೂ ಮಾನವೀಯತೆ ಹಾಗೂ ಮನುಷ್ಯತ್ವ ಉಳಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದರು.
ಓದಿ: ಸರ್ಕಾರಗಳು ಒಂದು ಧರ್ಮದ ಪರವಾಗಿ ಇರಬಾರದು: ಸಿದ್ದರಾಮಯ್ಯ
ಬುಧವಾರ ಏರ್ಪಡಿಸಿದ್ದ ಇಫ್ತಿಯಾರ್ ಸೌಹಾರ್ದ ಕೂಟದಲ್ಲಿ ಮುಸ್ಲಿಂ ಧರ್ಮಗುರು ಅಮೀರ್ - ಎ - ಶರಿಯತ್ ಮೌಲಾನ ಸಗೀರ್ ಅಹ್ಮದ್ ರಶಾದಿ, ಮೌಲಾನ ಮಕ್ಸುದ್ ಅಹ್ಮದ್, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಕರ್ನಾಟಕದ ಆರ್ಚ್ ಬಿಷಪ್ ರೇ. ಪೀಟರ್ ಮಚಾಡೋ, ರೇ. ಫಾ. ವಿಕ್ಟರ್ ಲೋಬೊ, ಸಿಖ್ ಧರ್ಮಗುರು ಗ್ಯಾನಿ ಜಸ್ಬಿರ್ ಸಿಂಗ್ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಎನ್. ಎ. ಹ್ಯಾರಿಸ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.