ಬೆಂಗಳೂರು: ಈಶ್ವರಪ್ಪನವರ ಗಲಾಟೆ ಆದ ಮೇಲೆ, ಹರ್ಷನ ಕೊಲೆ ಆದ ಮೇಲೆ ಒಂದು ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ಶಿವಮೊಗ್ಗ ಹರ್ಷನ ಕೊಲೆ ಕೇಸ್ ವಿಚಾರ ಪ್ರಸ್ತಾಪಿಸಿ, ಈ ಪ್ರಕರಣವನ್ನು ದಾರಿ ತಪ್ಪಿಸಲು ಪ್ಲಾನ್ ಮಾಡಿದ್ದಾರೆ. ಕೊಲೆ ಮಾಡಲಿಕ್ಕೂ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ಟ್ರಸ್ಟ್ ಇದೆ, ದೊಡ್ಡ ದೊಡ್ಡವರು ಆ ಟ್ರಸ್ಟ್ನಲ್ಲಿದ್ದಾರೆ. ಟ್ರಸ್ಟ್ನ ಸದಸ್ಯರು, ಅಧ್ಯಕ್ಷರೆಲ್ಲ ಸೇರಿ ಕೊಲೆಗೆ ಏನೇನೂ ಬೇಕೋ ಆ ಪದಾರ್ಥವನ್ನು ಸಂಗ್ರಹಿಸಿದ್ದಾರೆ. ಆದರೆ ಶಿವಮೊಗ್ಗ ಪೊಲೀಸರು ಬುದ್ಧಿವಂತಿಕೆಯಿಂದ ತನಿಖೆ ಮಾಡಿ ತಕ್ಷಣ ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡದಿದ್ದರೆ ದೊಡ್ಡ ಕೋಮುಗಲಭೆ ಸೃಷ್ಟಿಸಲು, ಈ ಎಲ್ಲಾ ಪ್ರಕರಣ ದಾರಿ ತಪ್ಪಿಸಲು ಹುನ್ನಾರ ನಡೆದಿತ್ತು. ನನ್ನ ಬಳಿ ಎಫ್ಐಆರ್ ಇದೆ. ಮಾರ್ಚ್ 20ರಿಂದ ಏಪ್ರಿಲ್ 14ರವರೆಗೂ ಏನೇನು ಸಂಚು ನಡೆಯಿತು ಎಂಬುದು ಗೊತ್ತು ಎಂದು ಡಿಕೆಶಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ರಾಕಿ, ವಿಶ್ವ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮುಖ್ಯ ಆರೋಪಿ ತಪ್ಪಿಸಿಕೊಂಡಿದ್ದಾನೆ. ರಾಜ್ಯದಲ್ಲಿ ಶಾಂತಿ ಭಂಗ ಮಾಡಲು ಒಂದು ತಂಡ ಪ್ರಯತ್ನ ಮಾಡಿತ್ತು. ಎಲ್ಲರೂ ಸರ್ಕಾರದ ಮಾತನ್ನು ನಂಬಿದ್ದಾರೆ. ಆದರೆ ಕೆಲವರು ಇದನ್ನು ಚೆನ್ನಾಗಿ ಹ್ಯಾಂಡಲ್ ಮಾಡಿದ್ದಾರೆ. ಟ್ರಸ್ಟ್ನ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತದೆ. ನನ್ನ ಬಾಯಲ್ಲಿ ಏಕೆ ಹೇಳಿಸ್ತೀರಾ?. ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಲ್ಲವೂ ಹೊರ ಬರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
'ಸಾಕ್ಷಿ ಏನಿದೆ ತೋರಿಸಲಿ': ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿಂದೆ ಮಹಾನಾಯಕರು ಇದ್ದಾರೆ ಎಂಬ ರಮೇಶ್ ಜಾರಕಿಹೊಳಿ ಆರೋಪ ವಿಚಾರವಾಗಿ ಮಾತನಾಡಿದ ಡಿಕೆಶಿ ಸಾಕ್ಷಿ ಏನಿದೆ ತೋರಿಸಲಿ, ಯಾರು ಬೇಡ ಅಂತಾರೆ. ನಾನೇನು 300 ಕೋಟಿ ಕೆಲಸವನ್ನು 800 ಕೋಟಿ ರೂ.ಗೆ ಮಾಡಿಸಿಕೊಂಡಿಲ್ಲ. ಟೈಮ್ ಬಂದಾಗ ಅದೆಲ್ಲಾ ಹೊರಗೆ ತೆಗೆಯುತ್ತೇನೆ ಎಂದಿದ್ದಾರೆ. ಸಣ್ಣ ಗುತ್ತಿಗೆದಾರರಿಂದ ಸಿಎಂಗೆ ದೂರು ವಿಚಾರವಾಗಿ ಮಾತನಾಡಿದ ಡಿಕೆಶಿ ಸಣ್ಣ ಗುತ್ತಿಗೆದಾರರಿಂದ ಹಣ ಕಲೆಕ್ಟ್ ಮಾಡಲು ತೊಂದರೆ ಆಗುತ್ತೆ ಎಂದು ದೊಡ್ಡವರಿಗೆ ಪ್ಯಾಕೇಜ್ ಕೊಡಲು ಹೊರಟ್ಟಿದ್ದಾರೆ. ಇದರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಕೆಂಪಣ್ಣ ದೂರು ನೀಡಿದ ಮೇಲೆ ಸಣ್ಣ ಗುತ್ತಿಗೆದಾರರನ್ನು ಮಟ್ಟ ಹಾಕಲು ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿ.ಟಿ.ರವಿಗೆ ತಿರುಗೇಟು: ಡಿಕೆಶಿ ಅಣ್ಣ ಹಜಾರೆ ರೀತಿ ದೇಶಕ್ಕೆ ಹೋರಾಟ ಮಾಡಿದ್ದಾರಾ? ಎಂಬ ಸಿ.ಟಿ. ರವಿ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರ ನೀಡಿದ ಡಿಕೆಶಿ, ಅಧಿಕಾರಿಗೆ ಫೋನ್ ಮಾಡಿ ಹೆದರಿಸಿದ್ದೂ ಸೇರಿದಂತೆ ಎಲ್ಲದರ ದಾಖಲೆಯೂ ಬಯಲಾಗುತ್ತದೆ. ಈಶ್ವರಪ್ಪ ಪ್ರಕರಣದಲ್ಲಿ ಎಲ್ಲಿ ಎಫ್ಐಆರ್ ಹಾಕಿದ್ದಾರೆ?, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಎಲ್ಲಿ ಪ್ರಕರಣ ದಾಖಲಿಸಿದ್ದಾರೆ? ತನಿಖೆ ನಡೆಯಬೇಕಾದರೆ ಸಿಎಂ ಮತ್ತು ಯಡಿಯೂರಪ್ಪನವರು ಈಶ್ವರಪ್ಪ ಏನು ತಪ್ಪು ಮಾಡಿಲ್ಲ ಎಂದು ಹೇಗೆ ಕ್ಲೀನ್ ಚಿಟ್ ಕೊಟ್ಟರು?, ಕೊಲೆ ಮಾಡಿರುವವರನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ.? ಎಂದು ಡಿಕೆಶಿ ಪ್ರಶ್ನಿಸಿದ್ದು ಸಿಎಂ ಪ್ರಜ್ಞಾವಂತರು ಎಂದು ತಿಳಿದಿದ್ದೆ, ಆದರೆ ಕರ್ನಾಟಕದ ಈ ಎಲ್ಲಾ ಅವಾಂತರಗಳಿಗೆ ಸಿಎಂ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ಸ್ವಾಮೀಜಿ ಆಶೀರ್ವಾದ: ಪಂಚಪೀಠಗಳಲ್ಲಿ ಒಂದಾದ ಉತ್ತರಖಂಡದ ಕೇದಾರಪೀಠದ ಜಗದ್ಗುರು ರಾವಲ್ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಶನಿವಾರ ಬೆಳಗ್ಗೆ ಆಗಮಿಸಿ, ಡಿ.ಕೆ.ಶಿವಕುಮಾರ್, ಪತ್ನಿ ಉಷಾ ಶಿವಕುಮಾರ್, ಪುತ್ರ ಆಕಾಶ್, ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರಿಂದ ಪೂಜೆ ಸ್ವೀಕರಿಸಿ, ಆಶೀರ್ವದಿಸಿದರು.
ಇದನ್ನೂ ಓದಿ: ಈಶ್ವರಪ್ಪ ಬಂಧನಕ್ಕಾಗಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ.. ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ