ಬೆಂಗಳೂರು: ಗಾಂಧಿ ಜಯಂತಿ ಪೂರೈಸಿ ವಿದೇಶಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಕ್ಟೋಬರ್ 9ರಂದು ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವಾಪಸಾಗಲಿದ್ದಾರೆ. ಲಂಡನ್ನಲ್ಲಿ ಓದುತ್ತಿರುವ ಪುತ್ರಿಯ ಭೇಟಿಗೆ ಅ.3ರಂದು ಕುಟುಂಬ ಸಮೇತ ತೆರಳಿದ್ದಾರೆ. ಅಲ್ಲಿಯೇ ಜನ್ಮದಿನ ಆಚರಿಸಿಕೊಂಡು ಭಾರತಕ್ಕೆ ಬರಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ರಾಜ್ಯದ ನೆರೆ ಮತ್ತು ಬರ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಪರವಾಗಿ ಸಾಕಷ್ಟು ಹೋರಾಟಗಳನ್ನು ನಡೆಸಿರುವ ಅವರು ವಿರಾಮ ಪಡೆದು ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 9ರಂದು ಅಲ್ಲಿಂದ ತೆರಳಲಿದ್ದಾರೆ. ಅಕ್ಟೋಬರ್ 10 ರಿಂದ 13ರವರೆಗೆ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಪ್ರತಿಪಕ್ಷ ಆಯ್ಕೆ ಸಭೆಗೂ ಗೈರಾಗಲಿದ್ದಾರೆ. ಇದನ್ನು ಹೈಕಮಾಂಡ್ಗೆ ಈಗಾಗಲೇ ತಿಳಿಸಿದ್ದಾರೆ. ಇದರಿಂದ ನೇರವಾಗಿ ಅಧಿವೇಶನಕ್ಕೆ ಅವರು ವಾಪಸಾಗಲಿದ್ದಾರೆ.
ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿಯೂ ಪ್ರವಾಸ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಹಂತ ತಲುಪಿದ ಸಂದರ್ಭದಲ್ಲೂ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ತೆರಳಿದರು. ಸುಧೀರ್ಘ ರಜೆ ಪಡೆದು ಪುತ್ರಿಯೊಂದಿಗೆ ಕುಟುಂಬ ಸಮೇತ ದಿನಕಳೆದು ವಾಪಸಾಗಿದ್ದರು. ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.