ಬೆಂಗಳೂರು : ಬಸವಕಲ್ಯಾಣ ಉಪಚುನಾವಣೆ ಜವಾಬ್ದಾರಿಯನ್ನು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೆಗಲಿಗೆ ವಹಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೀದರ್ ಜಿಲ್ಲಾ ಹಿರಿಯ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ, ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಪ್ರಚಾರ ಇತರೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಆದರೆ, ನಿನ್ನೆ ಸಣ್ಣಪ್ರಮಾಣದ ಅನಾರೋಗ್ಯ ಕಾಡಿದ ಹಿನ್ನೆಲೆ ತಪಾಸಣೆಗೆ ಒಳಗಾದ ಸಂದರ್ಭ ವರದಿ ಕೋವಿಡ್ ಪಾಸಿಟಿವ್ ಬಂದಿದೆ.
ಕೋವಿಡ್ ನಿಯಮಾವಳಿಗಳ ಪ್ರಕಾರ ಕ್ವಾರಂಟೈನ್ ಆಗಬೇಕಿರುವ ಹಿನ್ನೆಲೆ ಈಶ್ವರ್ ಕಂಡ್ರೆ ಬದಲಿಗೆ ಬೇರೊಬ್ಬ ನಾಯಕರ ಹೆಗಲಿಗೆ ಜವಾಬ್ದಾರಿ ವಹಿಸುವ ಅನಿವಾರ್ಯತೆ ಎದುರಾಗಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಬಸವಕಲ್ಯಾಣದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜವಾಬ್ದಾರಿಯನ್ನು ಮಾಜಿ ಸಚಿವ ರಾಜಶೇಖರ್ ಪಾಟೀಲ್ಗೆ ವಹಿಸಲು ತೀರ್ಮಾನಿಸಲಾಗಿದೆ.
ಬಸವಕಲ್ಯಾಣ ಕಾಂಗ್ರೆಸ್ ಮುಖಂಡರ ನಿವಾಸದಲ್ಲಿ ನಡೆದ ಗುಪ್ತ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಬೀದರ್ ಕಾಂಗ್ರೆಸ್ ಹಿರಿಯ ನಾಯಕ ರಾಜಶೇಖರ ಪಾಟೀಲ್, ಬೈರತಿ ಸುರೇಶ್, ಶಾಸಕ ಪ್ರಿಯಾಂಕ ಖರ್ಗೆ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಸೇರಿದಂತೆ ಕೈ ಪ್ರಮುಖರು ಭಾಗಿಯಾಗಿದ್ದರು.
ಖಂಡ್ರೆ ಈ ಭಾಗದ ಪ್ರಭಾವಿ ನಾಯಕ. ಈ ಹಿನ್ನೆಲೆ ಬೇರೊಬ್ಬರ ನೇಮಕ ಅನಿವಾರ್ಯವಾಗಿದೆ. ಗೆಲುವಿನ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಆತಂಕ ಬೇಡ. ಈಶ್ವರ್ ಖಂಡ್ರೆ ಅವರಷ್ಟೇ ಪಾಟೀಲ್ ಕೂಡ ಸಮರ್ಥ ನಾಯಕರು ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ಮನವರಿಕೆ ಮಾಡಿ ಕೊಟ್ಟರು.
ಇದನ್ನೂ ಓದಿ.. ವಿರೋಧದ ನಡುವೆ ಪ್ರೇಮ ವಿವಾಹ: ಹುಡುಗನ ಮನೆಗೆ ಬೆಂಕಿ ಹಚ್ಚಿದ ಯುವತಿ ಪೋಷಕರು!