ಜಲಗಾಂವ್ (ಮಹಾರಾಷ್ಟ್ರ): ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಗುಜರಾತ್ ಪೆಟ್ರೋಲ್ ಪಂಪ್ ಬಳಿಯ ಜಲಗಾಂವ್ ನಗರದ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ಮೇಲೆ ಬುಧವಾರ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. MH14 CL0716 ಎಂಬ ಆಂಬ್ಯುಲೆನ್ಸ್ ಇದಾಗಿದ್ದು, ಮನೀಶಾ ಎಂಬ ಗರ್ಭಿಣಿಯನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಈ ಘಟನೆ ನಡೆದಿದೆ.
ಬೆಂಕಿ ಹೊತ್ತಿಕೊಂಡಿರುವುದನ್ನು ಅರಿತ ಚಾಲಕ ಆಂಬ್ಯುಲೆನ್ಸ್ನಿಂದ ಕೆಳಗೆ ಜಿಗಿದಿದ್ದಾನೆ. ಸ್ಫೋಟದಲ್ಲಿ ಆಂಬ್ಯುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಫೋಟದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ. ಆಂಬ್ಯುಲೆನ್ಸ್ಗೆ ಬೆಂಕಿಹೊತ್ತಿಕೊಂಡ ಕೆಲವೇ ಹೊತ್ತಿನಲ್ಲಿ ಬೆಂಕಿ ಸುತ್ತಲೂ ಆವರಿಸುತ್ತಾ ಬಂದಿದ್ದು, ಬಳಿಕ ಆಂಬ್ಯುಲೆನ್ಸ್ ಒಳಗಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಮೀಪದಲ್ಲಿದ್ದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿರುವುದು ಸೆರೆಯಾಗಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಭಾರೀ ಎತ್ತರಕ್ಕೆ ಚಿಮ್ಮಿದೆ. ವಾಹನ ತುಂಡಾಗಿ 150 ಅಡಿ ಎತ್ತರಕ್ಕೆ ಹಾರಿದೆ. ಸ್ಫೋಟದ ನಡುಕ ಸುಮಾರು 500 ಮೀಟರ್ ದೂರದವರೆಗೆ ಆವರಿಸಿತ್ತು. ಭಯದಲ್ಲಿ ಜನ ದಿಕ್ಕಾಪಾಲಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Watch: A fire broke out in an ambulance carrying a pregnant woman in Jalgaon, Maharashtra. The fire caused an oxygen cylinder inside the ambulance to explode. The blast shattered windows of nearby houses in the Dadvadi area pic.twitter.com/uMBfhC8Tj1
— IANS (@ians_india) November 14, 2024
ಆಂಬ್ಯುಲೆನ್ಸ್ ಧರಂಗಾವ್‌ನಿಂದ ಜಲಗಾಂವ್‌ಗೆ ಬರುತ್ತಿತ್ತು. ಈ ವೇಳೆ ಆಂಬ್ಯುಲೆನ್ಸ್ ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ, ಆಂಬ್ಯುಲೆನ್ಸ್‌ನಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬಸ್ಥರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಬೇರೊಂದು ಆಂಬ್ಯುಲೆನ್ಸ್ಗೆ ಹತ್ತಿಸಿದ್ದ. ಬಳಿಕ ಸ್ಪಲ್ಪ ಮುಂದೆ ಹೋಗುತ್ತಿದ್ದಂತೆ ಆಂಬ್ಯುಲೆನ್ಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವಾಹನದಲ್ಲಿದ್ದ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಎಲ್ಲರ ಪ್ರಾಣ ಉಳಿದಿದೆ.
ಘಟನೆ ಕುರಿತು ಮಾಹಿತಿ ಪಡೆದ ನಗರಸಭೆ ಹಾಗೂ ಅಗ್ನಿಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಒಡೆದ ಸಿಲಿಂಡರ್‌ಗಳು ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದರೆ, ಖಾಲಿ ಸಿಲಿಂಡರ್ ವಾಹನದ ಬಳಿ ಬಿದ್ದಿದೆ. ಸೇತುವೆಯ ಕೆಳಗೆ ವಾಹನದ ಇತರೆ ತುಕಡಿಗಳು ಬಿದ್ದಿವೆ. ಸ್ಫೋಟ ತೀವ್ರತೆ ಎಷ್ಟಿತ್ತೆಂದರೆ ಸುತ್ತಲಿನ ಮನೆಗಳಿಗೂ ಇದರ ಬಿಸಿ ತಟ್ಟಿದ್ದು, ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಒಂದು ರೀತಿ ಭೂಕಂಪದಂತಹ ಅನುಭವ ತರಿಸಿತು. ಶಬ್ಧ ಕೇಳಿ ಮಲಗಿದ್ದವರೂ ಎದ್ದು ಕುಳಿತರು. ಘಟನೆಯಿಂದಾಗಿ ಹೆದ್ದಾರಿ ಬಂದ್ ಆಗಿತ್ತು. ಅರೆ ಕ್ಷಣ ಏನಾಯಿತೆಂದು ಯಾರಿಗೂ ಅರ್ಥವಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ವಿವರ ನೀಡಿದ್ದಾರೆ.
ಇದನ್ನೂ ಓದಿ: ಪಾಕ್ನ ಬಲೂಚಿಸ್ತಾನ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 21 ಜನ ಸಾವು, 46 ಮಂದಿಗೆ ಗಾಯ