ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಪಹರಣಕ್ಕೊಳಗಾಗಿದ್ದ ಐದು ವರ್ಷದ ಬಾಲಕಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪತ್ತೆಯಾಗಿದ್ದಾಳೆ.
ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಬಾಲಕಿಯನ್ನು ಪೋಷಕರ ಮಡಿಲಿಗೆ ಹಾಕಿ ಪ್ರಕರಣ ಸುಖ್ಯಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿ ಪತ್ತೆಗೆ ಕನ್ನಡ ಭಾಷೆ ಸಹಕಾರಿಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ:
ಕಾಕ್ಸ್ಟೌನ್ನ ನಿವಾಸಿವೊಬ್ಬರ ಐದು ವರ್ಷ ವಯಸ್ಸಿನ ಪುತ್ರಿ ಅಪಹರಣಕ್ಕೊಳಗಾಗಿದ್ದಳು. ಮಗುವಿನ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾಳೆ. ಮಗಳಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ತಾಯತ ಕಟ್ಟಿಸಲು ಕಾಟನ್ ಪೇಟೆಯ ದರ್ಗಾಕ್ಕೆ ಸೆ.18 ರಂದು ಅಜ್ಜನೊಂದಿಗೆ ಬಾಲಕಿ ತೆರಳಿದ್ದಳು.
ತಾಯತ ಕಟ್ಟಿಸಿಕೊಂಡು ಮನೆಗೆ ತೆರಳಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿರುವಾಗ ಆರೋಪಿಗಳಾದ ಜಾನ್ ಜೋಸೆಫ್ ದಂಪತಿ ಬಾಲಕಿಯನ್ನು ಮಾತನಾಡಿಸಿದ್ದಾರೆ. ಸಲುಗೆ ಹೆಚ್ಚಾಗಿ ಬಾಲಕಿಗೆ ಜ್ಯೂಸ್ ಕೊಡಿಸಿದ್ದಾರೆ. ಬಾಲಕಿಯ ತಾತ ಮೂಲತಃ ತಮಿಳುನಾಡಿನವರಾಗಿದ್ದರಿಂದ ದಂಪತಿ ಜೊತೆ ಕುಶಲೋಪರಿಯ ಮಾತಿಗಿಳಿದಿದ್ದಾರೆ.
ಇನ್ನೊಂದೆಡೆ ಜೊಸೆಫ್ ದಂಪತಿ ಜೊತೆಗಿದ್ದ ಮತ್ತೋರ್ವ ಗಂಡು ಮಗುವಿನೊಂದಿಗೆ ಬಾಲಕಿ ಆಟವಾಡುತ್ತಿದ್ದಳು. ಬಳಿಕ ಒಂದೇ ಬಸ್ನಲ್ಲಿ ಹತ್ತಿದ್ದ ಇವರು ಕ್ಷಣ ಮಾತ್ರದಲ್ಲಿ ಬಾಲಕಿಯ ತಾತನನ್ನು ಯಾಮಾರಿಸಿ ಆಕೆಯನ್ನು ಅಪಹರಿಸಿದ್ದರು. ಬಳಿಕ ನಿರಂತರ ಶೋಧ ನಡೆಸಿದರೂ ಸಿಗದ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರಿಗೆ ಬಾಲಕಿಯ ತಾತ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಭಾವಚಿತ್ರ ಹಾಗೂ ಮಾಹಿತಿ ಸಮೇತ ಎನ್ಸಿಆರ್ಬಿ ಪೋರ್ಟಲ್ನಲ್ಲಿ ವಿನಿಮಯ ಮಾಡಿಕೊಂಡಿದ್ದರು. ಇತ್ತ ಬಾಲಕಿಯನ್ನು ಅಪಹರಿಸಿದ ದಂಪತಿ ಕನ್ಯಾಕುಮಾರಿಗೆ ಹೋಗಿದ್ದಾರೆ. ಕನ್ಯಾಕುಮಾರಿಯಲ್ಲಿ ಅನುಮಾನಾಸ್ಪದವಾಗಿ ಚಾಲಾಕಿ ದಂಪತಿ ಓಡಾಡುತ್ತಿರುವುದು ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದೆ.
ಬಾಲಕಿ ಪತ್ತೆಗೆ ಸಹಾಯವಾದ ಕನ್ನಡ ಭಾಷೆ
ಅಲ್ಲದೆ ಜೊತೆಗಿದ್ದ ಗಂಡು ಮಗು ತಮಿಳಿನಲ್ಲಿ ಮಾತನಾಡುತ್ತಿದ್ದರೆ ಕಿಡ್ನ್ಯಾಪ್ ಆಗಿದ್ದ ಬಾಲಕಿ ಕನ್ನಡದಲ್ಲಿ ಮಾತನಾಡುತ್ತಿದ್ದಳು. ಕೂಡಲೇ ಬಾಲಕಿಯನ್ನು ಅಪಹರಿಸಿದ್ದ ದಂಪತಿಯನ್ನು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕಿಡ್ನಾಪ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಕನ್ಯಾಕುಮಾರಿಗೆ ಹೋಗಿ ಬಾಲಕಿಯನ್ನು ನಗರಕ್ಕೆ ಕರೆತಂದು ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಜೋಸೆಫ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.