ಬೆಂಗಳೂರು: ಕುವೈತ್ನಲ್ಲಿ ಅತಂತ್ರರಾಗಿರುವ 96 ಕನ್ನಡಿಗರ ಜೊತೆ ಜೂಮ್ ಆ್ಯಪ್ ಮೂಲಕ ಮಾತನಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಇಂದು ಕುವೈತ್ನಲ್ಲಿರುವ ಬೀದರ್ ಜಿಲ್ಲೆಯ ಕಾರ್ಮಿಕರ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಖಂಡ್ರೆ ಸಮಾಲೋಚನೆ ನಡೆಸಿದರು. ಈ ವೇಳೆ ಭಾರತೀಯ ವಿದೇಶಾಂಗ ಸಚಿವಾಲಯದ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ ಕೂಡ ಉಪಸ್ಥಿತರಿದ್ದರು.
ಕುವೈತ್ ಕನ್ನಡಿಗರನ್ನು ತವರಿಗೆ ಕರೆತರಲು ನಾನು ಮತ್ತು ನಮ್ಮ ತಂಡ ಹಗಲಿರುಳು ಶ್ರಮವಹಿಸಿದೆ. ತವರಿಗೆ ಮರಳುವ ಖುಷಿ ಅವರ ಮಾತಿನಲ್ಲೇ ಅರ್ಥವಾಗುತ್ತಿತ್ತು. ಹಂತ ಹಂತವಾಗಿ ಎಲ್ಲರನ್ನೂ ಕರೆತರುವ ಕೆಲಸ ಮಾಡುತ್ತೇವೆ. ಇಂದು ಕಾರ್ಮಿಕರು ವಾಪಸ್ ಬರುವಲ್ಲಿ ಕೇವಲ ನನ್ನದೊಂದೇ ಪ್ರಯತ್ನ ಇಲ್ಲ. ಆರತಿ ಅವರ ಸಹಕಾರ ಸಾಕಷ್ಟಿದೆ. ಕೋವಿಡ್ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದ ನಂತರ ಅವರನ್ನು ಜಿಲ್ಲೆಗೆ ವಾಪಸಾಗಿರುವ ಕಾರ್ಮಿಕರ ಸಮ್ಮುಖದಲ್ಲಿ ಸನ್ಮಾನ ಮಾಡಲು ತೀರ್ಮಾನಿಸಿದ್ದೇವೆ. ಕಾರ್ಮಿಕರಿಗೆ ತುಂಬಾ ಸಂತಸವಾಗಿದೆ. ಒಟ್ಟಾರೆ ಅತಂತ್ರವಾಗಿದ್ದ 196 ಮಂದಿ ಕಾರ್ಮಿಕರು ಎರಡು ಹಂತದಲ್ಲಿ ರಾಜ್ಯಕ್ಕೆ ವಾಪಾಸಾಗುತ್ತಿದ್ದಾರೆ. ಕುವೈತ್ನಲ್ಲಿ ಹೈದರಾಬಾದ್ ಮೂಲದ ಕಂಪನಿಯಲ್ಲಿ ಇವರು ಕೆಲಸ ಮಾಡಿಕೊಂಡಿದ್ದರು. 96 ಮಂದಿಯ ಒಂದು ಗುಂಪು ವಾಪಸಾಗುತ್ತಿದೆ. ಉಳಿದವರನ್ನು ಎರಡನೇ ಹಂತದಲ್ಲಿ ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಈಶ್ವರ್ ಖಂಡ್ರೆ ವಿವರಿಸಿದ್ದಾರೆ.