ಕೊರೊನಾ ಭೀತಿಯಿಂದ ಕಳೆದ ನಾಲ್ಕು ತಿಂಗಳಿಂದ ಬಂದ್ ಆಗಿದ್ದ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ಗಳನ್ನುಆಗಸ್ಟ್ 5 ರಿಂದ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಅಧ್ಯಕ್ಷ ನಟ ಜಿಮ್ ರವಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನಟ ರವಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಿಮ್ ತೆರೆಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಕೊನೆಗೂ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಫಂದಿಸಿ ಜಿಮ್ ತೆರೆಯಲು ಅನುಮತಿ ನೀಡಿದೆ. ರಾಜ್ಯದ ಎಲ್ಲಾ ಜಿಮ್ ಮಾಲೀಕರ ಪರವಾಗಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಅಲ್ಲದೆ ಜಿಮ್ ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದ ವೇಳೆ ಏನೆಲ್ಲಾ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದ್ದೇವೋ ಅದನ್ನು ಚಾಚೂ ತಪ್ಪದೆ ಪಾಲಿಸೋಣ ಎಂದು ರಾಜ್ಯದ ಎಲ್ಲಾ ಜಿಮ್ ಮಾಲೀಕರಲ್ಲಿ ಮನವಿ ಮಾಡುತ್ತೇನೆ.
ಸರ್ಕಾರ ಸೂಚಿಸುವ ಮಾರ್ಗಸೂಚಿಯನ್ನು ಫಾಲೋ ಮಾಡೋಣ. ಜನರಲ್ಲಿ ಉತ್ಸಾಹ ತುಂಬಿ ಮತ್ತೆ ಜಿಮ್ಗಳಿಗೆ ಬರುವಂತೆ ಮಾಡಲು ಪ್ರಯತ್ನಿಸೋಣ. ಜಿಮ್ಗೆ ಬರುವವರು ಪ್ರತ್ಯೇಕ ಕಿಟ್ ತರುವಂತೆ ಸೂಚಿಸಿ. ಕುಡಿಯಲು ಅವರೇ ಬಿಸಿ ನೀರು ತರುವಂತೆ ಸೂಚಿಸೋಣ. ಜಿಮ್ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಬಾರಿಗೆ ಹತ್ತು ಮಂದಿ ಮಾತ್ರ ವರ್ಕೌಟ್ ಮಾಡಲು ಅವಕಾಶ ಕೊಡಿ. ನಂತರ ಜಿಮ್ ಅನ್ನು ಮತ್ತೆ ಸ್ಯಾನಿಟೈಜ್ ಮಾಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡೋಣ ಎಂದು ರವಿ ಮನವಿ ಮಾಡಿದ್ದಾರೆ.