ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಆಗಿದ್ದ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಸೋತಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕೋಟಿ ಕೋಟಿ ಒಡೆಯ ಆಟೊ ರಿಕ್ಷಾ ಹಿಡಿದು ನಿರ್ಗಮಿಸಿದ್ದು ಗಮನ ಸೆಳೆಯುವಂತಿತ್ತು.
ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಸಾವಿರಾರು ಕೋಟಿಯ ಒಡೆಯರಾಗಿರುವ ಕೆಜಿಎಫ್ ಬಾಬು ನಾಮಪತ್ರ ಸಲ್ಲಿಸಲು ಬರುವಾಗ ಐಷಾರಾಮಿ ಕಾರಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದರು. ನಾಮಪತ್ರ ಸಲ್ಲಿಕೆ ನಂತರ ಸಾಕಷ್ಟು ವಿದ್ಯಮಾನಗಳು ನಡೆದರೂ ಗೆಲುವಿನ ವಿಶ್ವಾಸದಲ್ಲೇ ಇದ್ದರು. ಆದರೆ, ಇಂದು ಫಲಿತಾಂಶ ಹೊರ ಬೀಳುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಆಟೋ ಹತ್ತಿ ಬೇಸರದಿಂದ ತೆರಳಿದರು.
ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ಖಚಿತವಾಗುತ್ತಿದ್ದಂತೆ ನಿರಾಶರಾದ ಕೆಜಿಎಫ್ ಬಾಬು ಹತಾಶೆಗೊಂಡು ಮತ ಎಣಿಕಾ ಕೇಂದ್ರದಿಂದ ಹೊರ ನಡೆದರು. ಈ ವೇಳೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಮುಂದಾದರಾದರೂ ಬಾಬು ಯಾವ ಪ್ರತಿಕ್ರಿಯೆ ಕೊಡದೇ ರಸ್ತೆಯಲ್ಲಿ ಬಂದ ಆಟೋ ಹತ್ತಿ ಸ್ಥಳದಿಂದ ಕಾಲ್ಕಿತ್ತರು.
ವಿಧಾನ ಪರಿಷತ್ಗೆ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆಜಿಎಫ್ ಬಾಬು ಆಸ್ತಿ ಮೌಲ್ಯ ಬರೋಬ್ಬರಿ 1,745 ಕೋಟಿ ರೂ. ಗಿಂತಲೂ ಅಧಿಕವಾಗಿತ್ತು. ಈ ಮಾಹಿತಿಯನ್ನು ಅವರೇ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
(ಇದನ್ನೂ ಓದಿ: ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಭರ್ಜರಿ ಜಯ: ಪಕ್ಷೇತರ ಲಖನ್ ಜಾರಕಿಹೊಳಿಗೆ ಮುನ್ನಡೆ)