ಬೆಂಗಳೂರು: ಸಂಧಾನ ಸಭೆಯಲ್ಲಿ ಸರ್ಕಾರದ ನಿರ್ಧಾರ ಒಪ್ಪಿಕೊಂಡು ಫ್ರೀಡಂ ಪಾರ್ಕ್ಗೆ ಹೋಗಿ ನಿಲುವು ಬಲಿಸಿದ ಕೋಡಿಹಳ್ಳಿ ನೇತೃತ್ವದ ಧರಣಿನಿರತ ನೌಕರರ ಪ್ರತಿನಿಧಿಗಳ ಧೋರಣೆಗೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರಿಗೆ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಷ್ಕರ ಮುಂದುವರೆಸುವ ಕುರಿತು ನೌಕರರ ಪ್ರತಿನಿಧಿಗಳು ಫ್ರೀಡಂ ಪಾರ್ಕ್ನಲ್ಲಿ ಪ್ರಕಟಣೆ ಹೊರಡಿಸಿದ ನಂತರ ಪ್ರತಿಕ್ರಿಯೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ, ಇವರನ್ನು ಪರಿಗಣಿಸಿದರೆ ಇತರ ನಿಗಮದವರೂ ಕೇಳುತ್ತಾರೆ. ಅದು ಸ್ವಾಭಾವಿಕ ಕೂಡ ಎಂದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದರೆ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಬರುವ ಆದಾಯ ಎಲ್ಲ ವೇತನಕ್ಕೆ ಕೊಡಬೇಕಾಗುತ್ತದೆ. ಸರ್ಕಾರ ಎಂದರೆ ನಾನೊಬ್ಬನೇ ಅಲ್ಲ, ಮುಖ್ಯಮಂತ್ರಿಗಳು ಇದ್ದಾರೆ. ಹಣಕಾಸು ಇಲಾಖೆ ಇದೆ, ಸಚಿವರಿದ್ದಾರೆ, ಎಲ್ಲರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ. ನಾವೆಲ್ಲರೂ ಚರ್ಚೆ ಮಾಡಿಯೇ ಈ ನಿರ್ಧಾರ ಪ್ರಕಟಿಸಿದ್ದೇವೆ. ಈಗ ಮತ್ತೆ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಅಲ್ಲಿ ಚರ್ಚಿಸಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಎಸ್ಮಾ ಪ್ರಯೋಗದ ಸುಳಿವು:
ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ನಮ್ಮ ಸಂಧಾನ ಸಭೆಯಲ್ಲಿ ಒಪ್ಪಿಕೊಂಡು ಫ್ರೀಡಂ ಪಾರ್ಕ್ಗೆ ಹೋಗಿ ನಿರ್ಧಾರ ಬದಲಿಸಿದ್ದಾರೆ. ಒಬ್ಬ ವ್ಯಕ್ತಿಯ ಹಿಡಿತದಿಂದ ಹೀಗಾಗಿದೆ. ಸಾರಿಗೆ ವ್ಯವಸ್ಥೆಯನ್ನು, ಸಾರ್ವಜನಿಕ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ ಪ್ರತಿಷ್ಠೆ ವಿಷಯವನ್ನಾಗಿ ಮಾಡಿಕೊಂಡಿದ್ದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಜ್ಯದಲ್ಲಿ ಜನರಿಗೆ ಅನಾನುಕೂಲವಾಗುತ್ತಿದೆ. ಇದು ಏಕ ಹಿತಾಸಕ್ತಿಯಂತಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ಚರ್ಚೆಗಳನ್ನು ಮಾಡಿ ಪ್ರತಿಯೊಂದನ್ನು ಪರಿಶೀಲಿಸಿ 10 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರೂ ಈಗ ನಿಲುವು ಬದಲಿಸಿದ್ದಾರೆ. ಅಂತಿಮ ಸುತ್ತಿನ ಸಂಧಾನ ಸಭೆ ನಂತರ ನೌಕರರು ಬಸ್ಸನ್ನು ಓಡಿಸಲು ಮುಂದಾಗಿದ್ದರು. ಆದರೆ ಈಗ ಬಂದ್ ಮುಂದುವರಿಸುವುದಾಗಿ ಹೇಳಿದ್ದಾರೆ. ಇದು ಸರಿಯಲ್ಲಿ ಒಂದು ವೇಳೆ ಮುಷ್ಕರ ವಾಪಸ್ ಪಡೆಯದೇ ಇದ್ದಲ್ಲಿ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಸ್ಮಾ ಪ್ರಯೋಗದ ಚಿಂತನೆ ಮಾಡುವ ಕುರಿತು ಸುಳಿವು ನೀಡಿದರು.