ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರದ ಕುರಿತು ಮಾಹಿತಿ ನೀಡಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ನ ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್, ಜೆಡಿಎಸ್ನ ಟಿ.ಎ.ಶರವಣ ಕೋಟ್ಯಧೀಶರು ಎಂದು ತಿಳಿದು ಬಂದಿದೆ.
ಬಿಜೆಪಿ ಅಭ್ಯರ್ಥಿ ಕೇಶವ ಪ್ರಸಾದ್‌ಗಿಂತ ಅವರ ಪತ್ನಿಯೇ ಶ್ರೀಮಂತೆ. ಇನ್ನು ಹೇಮಲತಾ ನಾಯಕ್ ಬಳಿ ವಾಹನವಿಲ್ಲ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ವಿಧಾನಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಛಲವಾದಿ ನಾರಾಯಣಸ್ವಾಮಿ ಅವರು 6.33 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ನಾಮಪತ್ರ ವೇಳೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ 6,33,54,563 ರೂ. ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದು, ಇವರ ಹೆಸರಲ್ಲಿ 23.09 ಲಕ್ಷ ರೂ.ಚರಾಸ್ತಿ ಮತ್ತು 5.85 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಸುನಂದಾ ಹೆಸರಲ್ಲಿ ಚರಾಸ್ತಿ 23.99 ಲಕ್ಷ ರೂ. ಇದೆ. ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ. ಬ್ಯಾಂಕ್ ಖಾತೆಯಲ್ಲಿ ನಾರಾಯಣಸ್ವಾಮಿ ಅವರು 1.04 ಲಕ್ಷ ರೂ. ಹೊಂದಿದ್ದರೆ, ಸುನಂದಾ 41,431 ರೂ. ಹೊಂದಿದ್ದಾರೆ.
ನಾರಾಯಣಸ್ವಾಮಿ ಬಳಿ 4.50 ಲಕ್ಷ ರೂ. ಮೌಲ್ಯದ 90 ಗ್ರಾಂ ಚಿನ್ನವಿದೆ. ಪತ್ನಿ ಬಳಿ 20 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಮತ್ತು 3.50 ಲಕ್ಷ ರೂ. ಮೌಲ್ಯದ 5 ಕೆಜಿ ಬೆಳ್ಳಿ ಇದೆ. ಇನೋವಾ ಕಾರು ಹೊರತುಪಡಿಸಿದರೆ ಬೇರೆ ಯಾವುದೇ ವಾಹನ ಇಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ: ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು 36.57 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ತಮ್ಮ ಆಸ್ತಿ ವಿವರದಲ್ಲಿ 5 ಲಕ್ಷ ರೂ. ನಗದು ಹೊಂದಿದ್ದು, 5.84 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 29.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಪತ್ನಿ ಪುಷ್ಪಾ ಹೆಸರಲ್ಲಿ 64.21 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 30 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 15 ಲಕ್ಷ ರೂ. ನಗದು ಇದೆ. ಸವದಿ ಅವರು 1.81 ಕೊಟಿ ರೂ. ಸಾಲ ಹೊಂದಿದ್ದು, ಪತ್ನಿ ಹೆಸರಲ್ಲಿ ಒಂದು ಲಕ್ಷ ರೂ. ಸಾಲ ಇದೆ. ಲಕ್ಷ್ಮಣ ಸವದಿ ಬಳಿ 10 ಲಕ್ಷ ರೂ. ಮೌಲ್ಯದ 60 ತೊಲ ಚಿನ್ನ, 2 ಲಕ್ಷ ರೂ. ಮೌಲ್ಯದ 4.5 ಕೆಜಿ ಬೆಳ್ಳಿ ಇದೆ. ಅಂತೆಯೇ ಪತ್ನಿ ಬಳಿ 24 ಲಕ್ಷ ರೂ. ಮೌಲ್ಯದ 80 ತೊಲ ಚಿನ್ನ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದಾರೆ.
ಕೇಶವ ಪ್ರಸಾದ್: ನಗದು, ಠೇವಣಿ, ಶೇರು ಹೂಡಿಕೆ, ಬಂಗಾರ ಸೇರಿ 69.58 ಲಕ್ಷ ರೂ. ಹಾಗೂ ಅವರ ಪತ್ನಿ ಸಾವಿತ್ರಿ ಬಳಿ ಒಟ್ಟು 1.03 ಕೋಟಿ ರೂ. ಮತ್ತು ಮಗಳು ಯಶಸ್ವಿನಿ 13.36 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕೇಶವ ಪ್ರಸಾದ್ ತಮ್ಮ ಪತ್ನಿಗೆ 13.50 ಲಕ್ಷ ರೂ. ಸಾಲ ಕೊಟ್ಟಿದ್ದಾರೆ. ನಿವೇಶನ, ಮನೆ ಸೇರಿ ಕೇಶವ ಪ್ರಸಾದ್ ಬಳಿ 20 ಲಕ್ಷ ರೂ. ಮೌಲ್ಯ, ಅವರ ಪತ್ನಿ 1.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಹೇಮಲತಾ ನಾಯಕ್ : ಹೇಮಲತಾ ನಾಯಕ್ ಬಳಿ ವಾಹನವಿಲ್ಲ. ನಗದು, ಠೇವಣಿ, ಬಂಗಾರ ಒಳಗೊಂಡು 28.68 ಲಕ್ಷ ರೂ. ಮೌಲ್ಯ, ಅವರ ಪತಿ ಪರೀಕ್ಷಿತ್ ರಾಜ್ ನಾಯಕ್ ದ್ವಿಚಕ್ರ ವಾಹನ, ಬಂಗಾರ, ಠೇವಣಿ ಸಹಿತ 1.78 ಲಕ್ಷ ರೂ. ಮೌಲ್ಯ, ಮಗ ಪ್ರಿತೀಶ್ ನಾಯಕ್ 63,000 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕೊಪ್ಪಳ ತಾಲೂಕು ಭಾಗ್ಯನಗರದಲ್ಲಿ ಚಾಲ್ತಿ ಮಾರುಕಟ್ಟೆ ಮೌಲ್ಯದ ಪ್ರಕಾರ ತಲಾ 9.60 ಲಕ್ಷ ರೂ. ಬೆಲೆಬಾಳುವ ಮೂರು ನಿವೇಶನಗಳು, ಗಂಡನ ಹೆಸರಿನಲ್ಲಿ ಚಾಲ್ತಿ ಮಾರುಕಟ್ಟೆ ಮೌಲ್ಯದ ಪ್ರಕಾರ 12 ಲಕ್ಷ ರೂ. ಬೆಲೆಬಾಳುವ ಮನೆಯಿದೆ.
ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಯಾದವ್: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ನಾಗರಾಜ ಯಾದವ್ ಅವರು ತಮ್ಮ ಕುಟುಂಬ ಒಟ್ಟು 7.20 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿರುವುದಾಗಿ ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ತಮ್ಮ ಹಾಗೂ ತಮ್ಮ ಪತ್ನಿ ಬಳಿ ತಲಾ 20 ಸಾವಿರ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 31.63 ಲಕ್ಷ ರೂ., 5 ಲಕ್ಷ ರೂ. ಮೌಲ್ಯದ ವಿಮೆ, 9 ಲಕ್ಷ ರೂ. ಮೌಲ್ಯದ ಕಾರು, 2.25 ಲಕ್ಷ ರೂ. ಮೊತ್ತದ ಚಿನ್ನಾಭರಣ ಹಾಗೂ ತಮ್ಮ ಪತ್ನಿ ಬ್ಯಾಂಕ್ ಖಾತೆಯಲ್ಲಿ 23.56 ಲಕ್ಷ ರೂ. ಹಣ, 4.81 ಲಕ್ಷ ರೂ. ಬೆಲೆಯ ಕಾರು, 23.75 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ ಸೇರಿ ಇಬ್ಬರ ಬಳಿ ಒಟ್ಟು 1.08 ಕೋಟಿ ರೂ. ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
ಅದೇ ರೀತಿ, ಬೆಳಗಾವಿಯ ವಿವಿಧೆಡೆ ಪತ್ನಿ ಹೆಸರಲ್ಲಿ 1.88 ಕೋಟಿ ರೂ. ಮೌಲ್ಯದ 10 ಎಕರೆಗೂ ಹೆಚ್ಚು ಕೃಷಿ ಭೂಮಿ, ಬೆಂಗಳೂರಿನ ವಿವಿಧೆಡೆ 2.59 ಕೋಟಿ ರೂ. ಮೌಲ್ಯದ ನಾಲ್ಕು ವಾಸದ ಕಟ್ಟಡಗಳು, ಪತ್ನಿ ಹೆಸರಲ್ಲಿ 3.53 ಕೋಟಿ ರೂ. ಮೌಲ್ಯದ ಮೂರು ವಾಸದ ಮನೆಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ಕೆ. ಅಬ್ದುಲ್ ಜಬ್ಬಾರ್: ಕಾಂಗ್ರೆಸ್ ಅಭ್ಯರ್ಥಿ ಕೆ. ಅಬ್ದುಲ್ ಜಬ್ಬಾರ್ ಅವರು ಒಟ್ಟು 6.95 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಮ್ಮ ಕೈಯಲ್ಲಿ 50 ಸಾವಿರ ರೂ., ಪತ್ನಿ ಬಳಿ 10 ಸಾವಿರ ರೂ. ನಗದು ಇದ್ದು, ಬ್ಯಾಂಕ್‌ನಲ್ಲಿ 13.14 ಲಕ್ಷ ರೂ., ಪತ್ನಿ 4.69 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಠೇವಣಿ ಹೊಂದಿದ್ದಾರೆ. ತಮ್ಮ ಬಳಿ 10 ಲಕ್ಷ ರೂ. ಮೌಲ್ಯದ ಟೊಯೋಟಾ ಇನೋವಾ ಕಾರು, 10 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ, ಪತ್ನಿ ಬಳಿ 5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಸೇರಿ ಇಬ್ಬರ ಬಳಿ ಒಟ್ಟು 45.43 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ.
ಅದೇ ರೀತಿ ಕೃಷಿಯೇತರ ಭೂಮಿ, ವಾಣಿಜ್ಯ ಪ್ರದೇಶ, ವಸತಿ ಸೇರಿದಂತೆ ತಮ್ಮ ಹೆಸರಲ್ಲಿ ಒಟ್ಟು 5.82 ಕೋಟಿ ರೂ. ಮೌಲ್ಯದ ಚರಾಸ್ತಿ, ಪತ್ನಿ ಹೆಸರಲ್ಲಿ 68 ಲಕ್ಷ ರೂ. ಮೌಲ್ಯದ ಆಸ್ತಿ ಸೇರಿ ಒಟ್ಟು ಇಬ್ಬರ ಹೆಸರಲ್ಲಿ 6.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದಾರೆ. ಜತೆಗೆ 71.36 ಲಕ್ಷ ರೂ. ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣ: ಎರಡನೇ ಬಾರಿಗೆ ವಿಧಾನಪರಿಷತ್‌ಗೆ ಆಯ್ಕೆಯಾಗಲು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಟಿ.ಎ.ಶರವಣ ಅವರು 41.79 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಶರವಣ ಪತ್ನಿಯಿಂದ 6 ಕೋಟಿ ರೂ. ಮತ್ತು ಪುತ್ರಿ ಶೃತಿಯಿಂದ 10 ಲಕ್ಷ ರೂ. ಕೈ ಸಾಲ ಪಡೆದಿದ್ದಾರೆ.
ತಮ್ಮ ಆಸ್ತಿವಿವರದಲ್ಲಿ 41,79,64,103 ರೂ. ಹೊಂದಿರುವ ಬಗ್ಗೆ ನಮೂದಿಸಿದ್ದಾರೆ. ಶರವಣ ಹೆಸರಲ್ಲಿ 3,25,19,568 ರೂ. ಮತ್ತು 26,36,49,757 ರೂ. ಸ್ಥಿರಾಸ್ತಿ ಇದೆ. ಪತ್ನಿ ಶೀಲಾದೇವಿ ಹೆಸರಲ್ಲಿ 6,87,87,184 ರೂ. ಚರಾಸ್ತಿ ಹಾಗೂ 5,00,43,800 ರೂ. ಸ್ಥಿರಾಸ್ತಿ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ. ಪುತ್ರಿಯರಾದ ಶ್ರೇಯಾ ಹೆಸರಲ್ಲಿ 15,30,291 ರೂ., ಶೃತಿ ಹೆಸರಲ್ಲಿ 11,73,646 ರೂ. ಮತ್ತು ಪುತ್ರ ಸಾಯಿಪೃಥ್ವಿ ಹೆಸರಲ್ಲಿ 2,59,857 ರೂ. ಚರಾಸ್ತಿ ಇದೆ. ಆದರೆ, ಯಾರ ಹೆಸರಲ್ಲಿಯೂ ಸ್ಥಿರಾಸ್ತಿಯನ್ನು ಹೊಂದಿಲ್ಲ.
ಇದನ್ನೂ ಓದಿ: ಮೂರು ಪಕ್ಷಗಳ ಏಳು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.. ಎಲ್ಲಾ ಅಭ್ಯರ್ಥಿಗಳ ಅವಿರೋಧ ಆಯ್ಕೆ ಬಹುತೇಕ ಖಚಿತ