ಬೆಂಗಳೂರು : ಸುಪ್ರೀಂ ಕೋರ್ಟ್ ಪೀಠವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಹಾಗೆಯೇ, ಈ ವಿಚಾರವಾಗಿ ರಾಷ್ಟ್ರಪತಿಗಳ ಗಮನ ಸೆಳೆಯುವಂತೆ ಕೋರಿದೆ.
ಕೆಎಸ್ಬಿಸಿ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಶೇ.40ರಷ್ಟು ಪ್ರಕರಣಗಳು ದಕ್ಷಿಣ ಭಾರತದಿಂದಲೇ ದಾಖಲಾಗಿವೆ. ದೇಶದ ದೂರದ ರಾಜ್ಯಗಳಿಂದ ದೆಹಲಿಗೆ ಬಂದು ಪ್ರಕರಣಗಳನ್ನು ದಾಖಲಿಸಲು ಕಕ್ಷೀದಾರರ ವೆಚ್ಚ ಹೆಚ್ಚಿದಂತೆಯೇ ಸುಪ್ರೀಂಕೋರ್ಟ್ ಮೇಲಿನ ಕೆಲಸದ ಒತ್ತಡವೂ ಹೆಚ್ಚುತ್ತಿದೆ. ಹೀಗಾಗಿಯೇ ಕಾನೂನು ತಜ್ಞರು ದಕ್ಷಿಣ ಭಾರತದಲ್ಲಿಯೂ ಸುಪ್ರೀಂ ಕೋರ್ಟ್ನ ಖಾಯಂ ಪೀಠ ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದ್ದಾರೆ.
ಈಗಾಗಲೇ ಹಲವು ರಾಜ್ಯಗಳ ವಕೀಲರ ಪರಿಷತ್ತುಗಳು, ವಕೀಲರ ಸಂಘಗಳು ದಕ್ಷಿಣ ಭಾರತದಲ್ಲಿ ಸುಪ್ರೀಂ ಪೀಠ ಸ್ಥಾಪನೆ ಕೋರಿ ಲಿಖಿತ ಮನವಿ ಸಲ್ಲಿಸಿವೆ. 18ನೇ ಕಾನೂನು ಆಯೋಗವು ಸಾಂವಿಧಾನಿಕ ವಿಷಯಗಳನ್ನು ವಿಚಾರಣೆ ನಡೆಸಲು ದೆಹಲಿಯಲ್ಲಿ ಸಾಂವಿಧಾನಿಕ ಪೀಠ ಇರಿಸಿಕೊಂಡು, ನಾಲ್ಕು ಶಾಶ್ವತ ಪೀಠಗಳನ್ನು ರಚಿಸಲು ಶಿಫಾರಸ್ಸು ಮಾಡಿದೆ.
ಸಂವಿಧಾನದ 130ನೇ ವಿಧಿಯು ರಾಷ್ಟ್ರಪತಿಯವರ ಒಪ್ಪಿಗೆಯೊಂದಿಗೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಾದೇಶಿಕ ಪೀಠ ರಚಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರ ನೀಡುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಪೀಠ ಸ್ಥಾಪಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿಯೋಗ ಕೋರಿದೆ.
ಅಲ್ಲದೇ, ಸಂಸದೀಯ ಸ್ಥಾಯಿ ಸಮಿತಿ ವರದಿಗಳು ಜನ ಸಾಮಾನ್ಯರಿಗೆ ತ್ವರಿತ ನ್ಯಾಯ ಒದಗಿಸಲು ಸುಪ್ರೀಂಕೋರ್ಟ್ ನ ಪೀಠಗಳನ್ನು ದಕ್ಷಿಣ, ಪಶ್ಚಿಮ ಹಾಗೂ ಈಶಾನ್ಯ ಭಾಗದಲ್ಲಿ ಸ್ಥಾಪಿಸುವ ಕುರಿತು 2004, 2005 ಹಾಗೂ 2006ರ ಹೇಳಿವೆ. ಇದರಿಂದ ದೆಹಲಿಗೆ ತಲುಪಲಾಗದ ಬಡವರಿಗೆ ಅನುಕೂಲವಾಗುತ್ತದೆ ಎಂದೂ ವಿವರಿಸಿವೆ.
ಇದನ್ನೂ ಓದಿ: ಜಮನ್ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ:ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಆದರೆ, ಸುಪ್ರೀಂ ಕೋರ್ಟ್ ಈವರೆಗೆ ಪ್ರಾದೇಶಿಕ ಪೀಠ ಸ್ಥಾಪನೆಗೆ ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ, ಈ ಕುರಿತು ರಾಷ್ಟ್ರಪತಿಗಳ ಗಮನಕ್ಕೆ ತಂದು ಬೆಂಗಳೂರಿನಲ್ಲಿ ಪೀಠ ಸ್ಥಾಪಿಸಿದರೆ ದಕ್ಷಿಣ ಭಾರತ ರಾಜ್ಯಗಳಲ್ಲಿನ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಅನುಕೂಲವಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.