ಬೆಂಗಳೂರು/ಕೊಡಗು: ಮೇ 16 ರಿಂದ ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗೆ ಶಾಲೆಗಳು ಪುನಾರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಆರಂಭದ ಮುನ್ನ ದಿನ (ಮೇ 15) ರಂದೇ ಸಂಪೂರ್ಣ ಶಾಲಾ ಸ್ವಚ್ಛತೆ ಮಾಡಿಸಿ, ಮಕ್ಕಳನ್ನು ಬರಮಾಡಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಿಬ್ಬಂದಿ, ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮೊದಲ ದಿನ ಮೇ 16 ರಿಂದಲೇ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ಆರಂಭಿಸಬೇಕು. ಹಾಗಾಗಿ, ಶಿಕ್ಷಕರು ಸೇರಿದಂತೆ ಇತರೆ ಸಿಬ್ಬಂದಿ 15 ರಂದು ಶಾಲಾ ಸ್ವಚ್ಛತೆ, ಸುರಕ್ಷತೆ ಪರಿಶೀಲನೆ, ಪೂರ್ವಭಾವಿ ಸಭೆ, ತರಬೇತಿ, ಸಮಾಲೋಚನಾ ಸಭೆಗಳೊಂದಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಮೇ 16 ಕ್ಕೆ ಶಾಲೆ ಪ್ರಾರಂಭೋತ್ಸವ ನಡೆಸಿ ಮಕ್ಕಳನ್ನು ಸ್ವಾಗತಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಶಾಲಾ ಪ್ರಾರಂಭೋತ್ಸವಕ್ಕೆ ಪೋಷಕರನ್ನು ಆಹ್ವಾನಿಸಬೇಕು. ಪ್ರಾರಂಭೋತ್ಸವದ ದಿನ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಆಕರ್ಷಣಿಯಗೊಳಿಸಬೇಕು. ಮೊದಲ ದಿನ ಮಕ್ಕಳಿಗೆ ಸಿಹಿ ಊಟ ತಯಾರಿಸಿ ಬಡಿಸಬೇಕು. ಇದಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಇಲಾಖೆಯ ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.
ಮಿಂಚಿನ ಸಂಚಾರ: ಮೇ16 ರಿಂದ 20ರ ವರೆಗೆ ಪ್ರತಿ ಶಾಲೆಯಲ್ಲೂ ದಾಖಲಾತಿ ಆಂದೋಲನ ನಡೆಸಬೇಕು. ಮೇ 30 ರ ವರೆಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರತಿ ಶಾಲೆಗೂ ಮಿಂಚಿನ ಸಂಚಾರ ನಡೆಸಿ ಕುಡಿಯುವ ನೀರು, ಶೌಚಾಲಯ, ಪೀಠೋಪಕರಣ, ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಯಾವುದೇ ಸೌಕರ್ಯಗಳಲ್ಲಿ ಕೊರತೆ, ನ್ಯೂನತೆಗಳಿದ್ದರೆ ಸರಿಪಡಿಸಲು ಕ್ರಮ ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜೂನ್ 10 ರೊಳಗೆ ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಆಯುಕ್ತಾಲಯಗಳಿಗೆ ವಸ್ತುನಿಷ್ಠ ವರದಿಯನ್ನು ಕಳುಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಲಿಕಾ ಚೇತರಿಕೆ: ಕಳೆದ ಎರಡು ಕೋವಿಡ್ ವರ್ಷಗಳಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಿರುವುದನ್ನು ಸರಿದೂಗಿಸಲು ಪ್ರಸಕ್ತ ಸಾಲಿನ ಇಡೀ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಲಾಗಿದೆ. ಮೇ 16 ರಿಂದ 30ರವರೆಗೆ ಮಕ್ಕಳಿಗೆ ಸಂಪೂರ್ಣ ಹಿಂದಿನ ವರ್ಷದ ಕಲಿಕೆಯಲ್ಲಿ ಆಗಿರುವ ಕೊರತೆ ಸರಿದೂಗಿಸಲು ಪೂರಕವಾಗಿ ತರಗತಿಗಳು ನಡೆಯಲಿವೆ. ನಂತರ ಜೂನ್ 1ರಿಂದ ಕಲಿಕಾ ಚೇತರಿಕೆ ಜತೆಗೆ ಪ್ರಸಕ್ತ ವರ್ಷದ ಪಠ್ಯ ಬೋಧನಾ ಚಟುವಟಿಕೆಯನ್ನು ನಡೆಸಬೇಕು ಎಂದು ಶಿಕ್ಷಕರಿಗೆ ಇಲಾಖೆ ನಿರ್ದೇಶನ ನೀಡಿದೆ.
ಮೇ 19 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ: ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಕೊಡಗಿನಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 15 ದಿನಗಳ ಮೊದಲೇ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಮೇ 19 ರಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದರು.
ಜನ-ಜಾನುವಾರು ರಕ್ಷಣೆಗೆ ಮುಂದಾಗಿ: ಮಳೆಗಾಲ ಹತ್ತಿರವಾಗುತ್ತಿದ್ದು, ಮುಂಗಾರು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಗತ್ಯ ಮುನ್ನೆಚ್ಚರ ವಹಿಸಬೇಕು. ಜನ-ಜಾನುವಾರು ರಕ್ಷಣೆಗೆ ಮುಂದಾಗಬೇಕು. 2018, 2019, 2020 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮನಗಂಡು ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ., ತಾ.ಪಂ. ತಾಲೂಕು ಆಡಳಿತ, ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಹಂತದಲ್ಲಿ ಕಾರ್ಯಪಡೆಯನ್ನು ರಚಿಸಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಸ್ವಿಚ್ ಆಫ್ ಮಾಡಬಾರದು. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಎಲ್ಲಾ ಹಂತದ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.
ಇದನ್ನೂ ಓದಿ: Delhi fire tragedy: ಮೃತರ ಸಂಖ್ಯೆ 27ಕ್ಕೆ ಏರಿಕೆ, 12 ಮಂದಿ ಗಾಯ.. ಪಾರಾದವರು ಬಿಚ್ಚಿಟ್ಟರು ಕರಾಳತೆ