ಬೆಂಗಳೂರು: ಜಿಎಸ್‌ಟಿ ಪಾವತಿ ವಿಳಂಬದ ಕಾರಣಕ್ಕೆ ಉದ್ಯಮಿಯೊಬ್ಬರ ಜಿಎಸ್‌ಟಿಐಎನ್ ಸಂಖ್ಯೆಯನ್ನು ಬ್ಲಾಕ್ ಮಾಡಿರುವ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಇಲಾಖೆಗೆ ಇದೀಗ ಅದನ್ನು ಅನ್‌ಬ್ಲಾಕ್ ಮಾಡುವುದು ಹೇಗೆಂದು ತಿಳಿಯದೇ ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಮೂಲದ ಎ.ಡಿ.ಡಿ.ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈ.ಲಿ ಕೋವಿಡ್ನಿಂದಾಗಿ ಜಿಎಸ್‌ಟಿ ಹಣವನ್ನು ಸಕಾಲಕ್ಕೆ ಪಾವತಿಸದೇ ಬಾಕಿ ಉಳಿಸಿಕೊಂಡಿತ್ತು. ಈ ಸಂಬಂಧ ನೋಟಿಸ್ ನೀಡಿದ ಇಲಾಖೆ ಜಿಎಸ್‌ಟಿ ನಂಬರ್ ಅನ್ನು ಬ್ಲಾಕ್ ಮಾಡಿದೆ. ಬಳಿಕ ದಂಡಸಮೇತ ಜಿಎಸ್‌ಟಿ ಬಾಕಿ ಹಣ ಕಂಪನಿ ಪಾವತಿಸಿದೆ. ನಂತರ ಇಲಾಖೆಯು ಬ್ಲಾಕ್ ಮಾಡಲಾದ ಕಂಪನಿ ನಂಬರ್ ಅನ್ನು ಅನ್ ಬ್ಲಾಕ್ ಮಾಡಲು ಸಮಸ್ಯೆ ಎದುರಿಸಿದೆ.
ಕಳೆದ ಎರಡು ತಿಂಗಳಿಂದ ಜಿಎಸ್‌ಟಿ ನಂಬರ್ ಅನ್ ಬ್ಲಾಕ್ ಮಾಡಲು ಸಾಧ್ಯವಾಗದೇ ಇರುವ ಸಂಗತಿ ಬಗ್ಗೆ ಖಾಸಗಿ ಕಂಪನಿಯ ನಿರ್ದೇಶಕ ಗಿರೀಶ್ ಲಿಂಗಣ್ಣ ಸಂಸ್ಥೆಯ ವಹಿವಾಟು ನಡೆಸಲಾಗದೆ ತೀವ್ರ ಸಮಸ್ಯೆ ಎದುರಿಸುತ್ತಿರುವುದಾಗಿ ದೂರಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ರಾಜ್ಯದ ಜಿಎಸ್‌ಟಿ ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸಿರುವುದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ಗೆ ವಿಧಿಸುವ ಜಿಎಸ್‌ಟಿ ಕಡಿತಗೊಳಿಸಬೇಕು: ಹೋಟೆಲ್ ಉದ್ಯಮಿ ರವಿ ಶೆಟ್ಟಿ
ಇ-ಆಡಳಿತದಲ್ಲಿ ಇತರ ರಾಜ್ಯಗಳಿಗಿಂತ ತಾನು ಮುಂದಿದೆ ಎಂದು ಕರ್ನಾಟಕ ಹೇಳಿಕೊಂಡಿದೆ. ಆದರೆ ಬ್ಲಾಕ್ ಮಾಡಿದ ಡಿಜಿಟಲ್ ತೆರಿಗೆ ಖಾತೆಯನ್ನು ಅನ್‌ಬ್ಲಾಕ್ ಮಾಡುವುದು ಸ್ವತಃ ಇಲಾಖೆಗೇ ಕಷ್ಟವಾಗಿದೆ. ಮೇಲ್ಮನವಿ ಆದೇಶದ ಹೊರತಾಗಿಯೂ ಕಳೆದ ಎರಡು ತಿಂಗಳಿನಿಂದ ವ್ಯಾಪಾರ ಸಂಸ್ಥೆಯೊಂದರ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN) ಅನ್ನು ಮರುಸ್ಥಾಪಿಸಲು ವಾಣಿಜ್ಯ ತೆರಿಗೆ ಇಲಾಖೆಗೆ ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಕಂಪನಿಯ ಮಾಲೀಕರಿಗೆ ಇ-ವೇ ಬಿಲ್ ಸಂಖ್ಯೆಯನ್ನು ಉತ್ಪಾದಿಸಲು ಸಾಧ್ಯವಾಗದೆ, ಗ್ರಾಹಕರು ಈಗಾಗಲೇ ಇರಿಸಿದ ಆರ್ಡರ್‌ಗಳಿಗೆ ತಮ್ಮ ಸರಬರಾಜುಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ಎ.ಡಿ.ಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ (ಪಿ) ಲಿಮಿಟೆಡ್‌ನ ನಿರ್ದೇಶಕ ಗಿರೀಶ್ಗೆ ಜಿಎಸ್‌ಟಿ ಸಂಬಂಧಿತ ಸಮಸ್ಯೆಗಳು 2021ರಲ್ಲಿ ಪ್ರಾರಂಭವಾದವು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಅವರ ಕಂಪನಿಗೆ ಜಿಎಸ್‌ಟಿ ಪಾವತಿಸುವುದು ಸವಾಲಾಗಿ ಪರಿಣಮಿಸಿತು. ಅನಂತರ ಅವರ ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಹಾಗಿದ್ದರೂ, ಅವರು ತಮ್ಮ ಉದ್ಯೋಗಿಗಳನ್ನು ಉಳಿಸಿಕೊಂಡು ಅವರ ವೇತನವನ್ನು ಮುಂದುವರೆಸಿದರು. ಇಲಾಖೆಯು ಜಿಎಸ್‌ಟಿಯ ವಿಳಂಬ ಪಾವತಿಯನ್ನು ಉಲ್ಲೇಖಿಸಿ, ಅವರ 15-ಅಂಕಿಯ ಜಿಎಸ್‌ಟಿಐಎನ್ ಅನ್ನು ಅಮಾನತುಗೊಳಿಸಿದೆ. ಜಿಎಸ್‌ಟಿಐಎನ್ ಇಲ್ಲದೆ, ಅವರು ಯಾವುದೇ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ. ಈ ಕಂಪನಿಯು ಕತ್ತರಿಸುವ ಸಲಕರಣೆಗಳು ಮತ್ತು ರಕ್ಷಣಾ ಉಪಕರಣಗಳ ತಯಾರಿಸುತ್ತದೆ ಮತ್ತು ಪೂರೈಸುತ್ತದೆ.
ಜಿಎಸ್‌ಟಿ ಪಾವತಿಯಾಗದ ಕಾರಣ ಇಲಾಖೆ ಸಂಸ್ಥೆಯ ನಿರ್ದೇಶಕರಿಗೆ ಎರಡು ನೋಟಿಸ್‌ಗಳನ್ನು ಜಾರಿಗೊಳಿಸಿತ್ತು. ಪರಿಸ್ಥಿತಿ ಸುಧಾರಿಸಿದ ನಂತರ ಆ ಕಂಪನಿ 2 ಲಕ್ಷಕ್ಕೂ ಹೆಚ್ಚು ವಿಳಂಬ ಪಾವತಿ ಶುಲ್ಕ ಸೇರಿ 17 ಲಕ್ಷಕ್ಕೂ ಹೆಚ್ಚು ಜಿಎಸ್‌ಟಿ ಮೊತ್ತವನ್ನು 2021ರ ಡಿಸೆಂಬರ್‌ನಲ್ಲಿ ಪಾವತಿಸಿದರು. ದಂಡ ಸಹಿತ ಜಿಎಸ್‌ಟಿ ಹಣ ಪಾವತಿಸಿದ ಬಳಿಕ ಕಂಪನಿಯ ಜಿಎಸ್‌ಟಿಐಎನ್ ಅನ್ನು ಮರು ಚಾಲನೆಗೊಳಿಸುವ ಕಾರ್ಯ ಜಿಎಸ್‌ಟಿ ಇಲಾಖೆಯದಾಗಿತ್ತು. ಆದ್ರೆ ಇಲಾಖೆ ಜಿಎಸ್‌ಟಿಐಎನ್ ಮರು ಚಾಲನೆಗೊಳಿಸುವ ಕಾರ್ಯದ ಸಮಸ್ಯೆ ಎದುರಿಸುತ್ತಿದೆ. ಅಷ್ಟೇ ಅಲ್ಲದೇ ಕಂಪನಿ ಹಲವಾರು ಮನವಿಗಳನ್ನು ಸಲ್ಲಿಸಿದೆ. ಆದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಸರಕು ಮತ್ತು ಸೇವಾ ತೆರಿಗೆ (ಅಪೀಲುಗಳು)-2 ಬೆಂಗಳೂರು ಜಂಟಿ ಆಯುಕ್ತರ ಮುಂದೆ ಕಂಪನಿ ರದ್ದುಗೊಂಡಿರುವ ಜಿಎಸ್‌ಟಿಐಎನ್ ಸಂಖ್ಯೆಯನ್ನು ಮರುಸ್ಥಾಪಿಸುವಂತೆ ಮನವಿ ಮಾಡಿತು.
ಇದನ್ನೂ ಓದಿ: ಕಂಪನಿ ವಾರ್ಷಿಕ ವಹಿವಾಟಿನಿಂದ ದಂಗಾದ ಜಿಎಸ್‌ಟಿ.. ದಾಳಿ ವೇಳೆ ಭೂಮಿಯಿಂದ ಸಿಕ್ತು 19 ಕೆಜಿ ಬೆಳ್ಳಿ, 10 ಕೋಟಿ ನಗದು!
ಸಂಸ್ಥೆಯ ನಿರ್ದೇಶಕರು ಡಿಸೆಂಬರ್ 21 ರಿಂದ ಫೆಬ್ರವರಿ 2022 ರ ವರೆಗಿನ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗಲಿಲ್ಲ. ನೋಂದಣಿ ರದ್ದತಿಯನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಹೋಗುವುದು ಅವರಿಗೆ ಅನಿವಾರ್ಯವಾಯಿತು. ಮಾರ್ಚ್ 31, 2022 ರಂದು, ಟ್ರಿಬ್ಯೂನಲ್ ಗಿರೀಶ್ ಅವರ ವಾದವನ್ನು ಎತ್ತಿಹಿಡಿದಿದೆ ಮತ್ತು ಜಿಎಸ್‌ಟಿಐಎನ್ ಅನ್ನು ಮರುಸ್ಥಾಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿತು.
ಆದರೆ, ಇಂದಿನವರೆಗೂ ವಾಣಿಜ್ಯ ತೆರಿಗೆ ಇಲಾಖೆಯು ನೋಂದಣಿ ರದ್ದು ಪ್ರಕ್ರಿಯೆ ಸ್ಥಗಿತಗೊಳಿಸಿಲ್ಲ. ನಾನು ಹಲವಾರು ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಬೇಕಾಗಿದೆ. ಜಿಎಸ್‌ಟಿ ಸಂಖ್ಯೆ ಇಲ್ಲದೆ, ನಾನು ಇ-ವೇ-ಬಿಲ್ ಅನ್ನು ಹೇಗೆ ತಯಾರಿಸಲು ಸಾಧ್ಯ?. ನಾನು ಈ ಅತಿಯಾದ ವಿಳಂಬಕ್ಕೆ ಕಾರಣವನ್ನು ಕೋರಿ ಇಲಾಖೆಯ ಅನೇಕ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅವರು ಈ ಬಗ್ಗೆ - ನೋಂದಣಿಯನ್ನು ಮರುಸ್ಥಾಪಿಸುವ ವಿಧಾನ ತಿಳಿದಿಲ್ಲ ಎಂದು ಹೇಳುತ್ತಾರೆ ಎಂದರು.
ಅಂತಹ ಹಾರಿಕೆಯ ಉತ್ತರವನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ಇದು ಇ-ಆಡಳಿತದ ಯುಗ. ಸರ್ಕಾರಿ ಇಲಾಖೆಯು ಕಂಪನಿಯ ನೋಂದಣಿಯನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದೇನೋ ಸರಿ. ಆದರೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಅದನ್ನು ಮರುಸ್ಥಾಪಿಸಲು ಸಾಧ್ಯವಾಗುವುದಿಲ್ಲ ಏಕೆ ಎಂಬುದು ಗಿರೀಶ್ ಅವರ ಪ್ರಶ್ನೆ. ಇಲಾಖೆಯ ಕಚೇರಿಗೆ ಹಲವಾರು ಬಾರಿ ಅಲೆದರು ಪ್ರಯೋಜನವಾಗಿಲ್ಲ ಎಂದು ಗಿರೀಶ್ ಬೇಸರ ವ್ಯಕ್ತಪಡಿಸಿದರು.
ಇದೀಗ ಕಳೆದ ಎರಡು ತಿಂಗಳುಗಳಲ್ಲಿ ಆಗಿರುವ ಕೋಟ್ಯಂತರ ರೂಪಾಯಿ ನಷ್ಟಕ್ಕೆ ನ್ಯಾಯಾಲಯದ ಮೊರೆ ಹೋಗುವ ಮೂಲಕ ಪರಿಹಾರ ಪಡೆಯುವುದಾಗಿ ಅವರು ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.