ಬೆಂಗಳೂರು: ಒಮಿಕ್ರಾನ್ ಆತಂಕದ ನಡುವೆಯೇ ವಿದೇಶದಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಕೇಂಪೇಗೌಡ ಏರ್ಪೋರ್ಟ್ನಲ್ಲಿ ಇಂದು 8 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ ದುಬೈನಿಂದ ಬಂದ 7 ಮಂದಿಗೆ ಹಾಗೂ ಯುಕೆಯಿಂದ ಬಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರೆಲ್ಲರನ್ನ ಬೌರಿಂಗ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ದಾಖಲಿಸಿದೆ. ಪಾಸಿಟಿವ್ ಬರುವ ಪ್ರಯಾಣಿಕರಿಗೆ ಪಿಪಿಇ ಕಿಟ್ ಹಾಕಿ ಆಂಬ್ಯುಲನ್ಸ್ ಮೂಲಕ ರವಾನೆ ಮಾಡಲಾಗುತ್ತಿದೆ. ಜೊತೆಗೆ ಪಾಸಿಟಿವ್ ಬಂದ ಪ್ರಯಾಣಿಕರ ಮಾದರಿಯನ್ನು ಜಿನೋಮಿಕ್ ಸಿಕ್ವೆನ್ಸ್ ಪರೀಕ್ಷೆಗೆ ರವಾನಿಸಲಾಗಿದೆ.
ಇನ್ನು ಗುರುವಾರ, 33 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ದೃಢಪಟ್ಟ ಹಿನ್ನೆಲೆ ಮನೆಯನ್ನು ಕಂಟೋನ್ಮೆಂಟ್ ಜೋನ್ ಮಾಡಲಾಗಿದೆ. ಸೌತ್ ಆಫ್ರಿಕಾದಿಂದ ದೆಹಲಿಗೆ ಬಂದು, ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು. ಏರ್ ಪೋರ್ಟ್ನಲ್ಲಿ ನೆಗೆಟಿವ್ ರಿಪೋರ್ಟ್ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ನಲ್ಲಿದ್ದರು. ಆದರೆ, ಬಳಿಕ ರೋಗ ಲಕ್ಷಣ ಕಾಣಿಸಿಕೊಂಡಿದೆ. ನಂತರ ಪಾಸಿಟಿವ್ ಬಂದಿದ್ದು, ಒಮಿಕ್ರಾನ್ ದೃಢಪಟ್ಟಿದೆ. ಇದೀಗ ಸೋಂಕಿತನ ಮನೆ ಕಂಟೋನ್ಮೆಂಟ್ ಜೋನ್ ಮಾಡಿರುವ ಬಿಬಿಎಂಪಿ, 14 ದಿನ ಗೃಹ ಬಂಧನದಲ್ಲಿದ್ದೇವೆ ಎಂದು ಬೋರ್ಡ್ ಹಾಕಿದೆ.
Karnataka Covid Report:
ರಾಜ್ಯದಲ್ಲಿಂದು 238 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು 317 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7076 ಇದೆ. ಈವರೆಗೆ ಒಟ್ಟು 29,56,405 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 30,01,792 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 38,282 ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ 153 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ, ಇಬ್ಬರು ಮೃತಪಟ್ಟಿದ್ದಾರೆ. 5596 ಸಕ್ರಿಯ ಪ್ರಕರಣಗಳಿವೆ.