ಬೆಂಗಳೂರು: 2022-23ನೇ ಸಾಲಿನ ಬಜೆಟ್ ಮಂಡನೆಗೆ ಸಿಎಂ ಬಸವರಾಜ ಬೊಮ್ಮಾಯಿ ತಯಾರಿ ಪ್ರಾರಂಭಿಸಿದ್ದಾರೆ. ಆದರೆ ಇತ್ತ 2021-22ನೇ ಸಾಲಿನ ಬಜೆಟ್ ಅನುಷ್ಠಾನದಲ್ಲಿ ಮಾತ್ರ ಸರ್ಕಾರ ಹಿಂದೆ ಬಿದ್ದಿದೆ. ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರ ಇಲಾಖಾವಾರು ಬಜೆಟ್ ಅನುಷ್ಠಾನ ಮಾಡುವಲ್ಲಿ ಪರದಾಡುತ್ತಿದೆ.
ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಬೊಮ್ಮಾಯಿ ಸಿದ್ಧತೆ ಆರಂಭಿಸಿದ್ದಾರೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈ ಬಜೆಟ್ ಬಿಜೆಪಿ ಸರ್ಕಾರಕ್ಕೆ ನಿರ್ಣಾಯಕವಾಗಿದೆ. ಚುನಾವಣೆ ಮುನ್ನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಇದಾಗಿರಲಿದೆ. ಹೀಗಾಗಿ ಬಜೆಡ್ ಮಂಡನೆ ಅಷ್ಟೇ ಅಲ್ಲ, ಅದರ ಅನುಷ್ಠಾನದತ್ತವೂ ಸಿಎಂ ಬೊಮ್ಮಾಯಿ ಹೆಚ್ಚಿನ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಜನರಿಗೆ ಪ್ರಿಯವಾಗುವಂತಹ ಬಜೆಟ್ ಮಂಡನೆ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಆದರೆ, ಇತ್ತ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಂಡಿಸಿದ 2021-22ನೇ ಸಾಲಿನ ಬಜೆಟ್ ಅನುಷ್ಠಾನಕ್ಕೆ ಅರ್ಧಚಂದ್ರ ಆವರಿಸಿದೆ. ಆರ್ಥಿಕವಾಗಿ ಸೊರಗಿರುವ ಸರ್ಕಾರ 2021-22ನೇ ಸಾಲಿನ ಬಜೆಟ್ ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆ.
ಬಜೆಟ್ ಅನುಷ್ಠಾನದಲ್ಲಿ ಹಿನ್ನಡೆ:
ಕಳೆದ ವರ್ಷ ಸಿಎಂ ಯಡಿಯೂರಪ್ಪ 2,46,207 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ರಾಜಸ್ವ ಕೊರತೆಯ ಬಜೆಟ್ ಮಂಡನೆ ಮಾಡಿದ್ದರು. ಒಟ್ಟು ರಾಜಸ್ವ ಸ್ವೀಕೃತಿ 1,72,271 ಕೋಟಿ ರೂ. ಅಂದಾಜಿಸಲಾಗಿತ್ತು. ಈ ಪೈಕಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹದ ಅಂದಾಜು 1,11,494 ಕೋಟಿ ರೂ. ಇದೆ.
(ಇದನ್ನೂ ಓದಿ: ಕೋವಿಡ್ನಿಂದ ಪತಿ ನಿಧನ : ತಬ್ಬಲಿ ಮಗು, ವಿಧವೆಗೆ ಹೊಸ ಬಾಳು ನೀಡಿದ ಮೃತ ಗಂಡನ ಸಹೋದರ!
ಆದರೆ, ಕೊರೊನಾ ಲಾಕ್ಡೌನ್ನಿಂದ ಆದಾಯ ಸಂಗ್ರಹ ಬರಿದಾಗಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಜೆಟ್ ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ಹೆಣಗಾಡುವಂತಾಗಿದೆ. ಒಟ್ಟು ಬಜೆಟ್ ಮೊತ್ತದಲ್ಲಿ ಸುಮಾರು 41,900 ಕೋಟಿ ರೂ. ಅಸಲು ಬಡ್ಡಿ ಪಾವತಿ ಮಾಡಲಾಗಿದೆ. ಉಳಿದ ಬಜೆಟ್ ಮೊತ್ತ 2,04,303 ಕೋಟಿ ರೂ. ಆಗಿದೆ. ಆದರೆ, ಡಿಸೆಂಬರ್ವರೆಗೆ ಕೇವಲ 1,25,971 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಂದರೆ ಬಜೆಟ್ ಅನುಷ್ಠಾನ ಕೇವಲ ಅರ್ಧ ಭಾಗದಷ್ಟು ಮಾತ್ರ ಆಗಿದೆ. ಬಹುತೇಕ ಇಲಾಖೆಗಳು ಹಂಚಿಕೆಯಾದ ಅನುದಾನದ ಪೈಕಿ ಕಡಿಮೆ ವೆಚ್ಚ ಮಾಡಿದ್ದು, ಪ್ರಗತಿಯಲ್ಲಿ ಕುಂಠಿತ ಕಂಡಿದೆ. ಸಾಂಖ್ಯಿಕ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಡಿಸೆಂಬರ್ವರೆಗೆ ಬಜೆಟ್ ಪ್ರಗತಿ ಕೇವಲ ಶೇ.55 ಮಾತ್ರ.
ಕಳಪೆ ಬಜೆಟ್ ಅನುಷ್ಠಾನದ ಇಲಾಖೆ:
ಇಲಾಖೆ | ಪ್ರಗತಿ (%) |
ವಸತಿ | 41 |
ಗ್ರಾಮೀಣಾಭಿವೃದ್ಧಿ | 42 |
ಮಹಿಳಾ ಮತ್ತು ಮಕ್ಕಳ ಕಲ್ಯಾಣ | 57 |
ಜಲಸಂಪನ್ಮೂಲ | 42 |
ಹಿಂದುಳಿದ ವರ್ಗಗಳ ಕಲ್ಯಾಣ | 33 |
ಕೃಷಿ | 37 |
ಮೂಲಭೂತ ಸೌಕರ್ಯ | 36 |
ಅಲ್ಪಸಂಖ್ಯಾತ ಕಲ್ಯಾಣ | 49 |
ಕೈಗಾರಿಕೆ ಮತ್ತು ವಾಣಿಜ್ಯ | 30 |
ಪರಿಶಿಷ್ಠ ಪಂಗಡ | 48 |
ಯುವ ಸಬಲೀಕರಣ | 49 |
ತೋಟಗಾರಿಕೆ | 32 |
ಕನ್ನಡ ಮತ್ತು ಸಂಸ್ಕೃತಿ | 31 |
ಇಂಧನ | 57 |
ಲೋಕೋಪಯೋಗಿ | 42 |