ಬೆಂಗಳೂರು: ಬಿಟ್ ಕಾಯಿನ್ (Bitcoin) ಪ್ರಕರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ಊಹೆಗೂ ನಿಲುಕದ ವಿಚಾರ. ಮುಖ್ಯಮಂತ್ರಿಗಳ ದಾರಿ ತಪ್ಪಿಸಲು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವ ಷಡ್ಯಂತ್ರ ಇದಾಗಿದೆ ಎಂದು ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಗಾಂಭೀರ್ಯತೆ ಅರ್ಥ ಮಾಡಿಕೊಳ್ಳಬೇಕು. ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮಗ. ಖರ್ಗೆ ಅವರು ಎತ್ತರಕ್ಕೆ ಬೆಳೆದ ನಾಯಕರು. ಅವರ ಮಗ ಹೀಗೆ ಮಾಹಿತಿ ಇಲ್ಲದೆ ಸಿಎಂ ಬಿಟ್ ಕಾಯಿನ್ (CM Bommai) ಹಗರಣದಲ್ಲಿ ಭಾಗಿಯಾಗಿದ್ದಾರೆ, ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು.
ನನಗೆ ಬಿಟ್ ಗೊತ್ತಿಲ್ಲ, ಕಾಯಿನ್ ಗೊತ್ತಿಲ್ಲ, ಬೀಟ್ ಪೊಲೀಸ್ ಮಾತ್ರ ಗೊತ್ತು. ಈಗಾಗಲೇ ನಮ್ಮ ಸಿಎಂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅನಾವಶ್ಯಕವಾಗಿ ಜನ ಮೆಚ್ಚುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಗಳ ದಾರಿ ತಪ್ಪಿಸಲು ಮಾಡುತ್ತಿರುವ ಷಡ್ಯಂತ್ರ ನಿಲ್ಲಿಸಿ. ಮುಂದೆ ಚುನಾವಣೆ ಬರಲಿದೆ, ಆಗ ಹೋರಾಟ ಮಾಡಿ ಎಂದರು.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರಿದೆ: ಸಿಎಂ ತಿರುಗೇಟು
ಸರ್ಕಾರದ ದಾರಿ ತಪ್ಪಿಸುವ ಕೆಲಸ ನಡೆಯಿತ್ತಿದೆ. ಸರಳ, ಸಜ್ಜನ ಸಿಎಂ ಬೊಮ್ಮಾಯಿ ಆಗಿದ್ದಾರೆ. ಬಿಟ್ ಕಾಯಿನ್ ಆರೋಪ ಅಪಪ್ರಚಾರದ ಇನ್ನೊಂದು ಮಾರ್ಗ. ಕಾನೂನು ಚೌಕಟ್ಟಿನಲ್ಲಿ ಏನೇನು ಮಾಡಬೇಕೋ ಸರ್ಕಾರ ಅದನ್ನು ಮಾಡುತ್ತಿದೆ. ಪಾರದರ್ಶಕವಾಗಿ ಮಾಡುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಸಿಎಂಗೆ ಪ್ರಕರಣದ ಗಾಂಭೀರ್ಯತೆಯ ಅರಿವಿದೆ. ಇದರಲ್ಲಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ಊಹೆಗೂ ನಿಲುಕದ ವಿಚಾರ. ಪ್ರಿಯಾಂಕ ಖರ್ಗೆಗೆ ಮಾಹಿತಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.
ಪದೆ ಪದೇ ಮಾಡುವ ಆರೋಪಕ್ಕೆ ಉತ್ತರ ನೀಡಬೇಕಿಲ್ಲ. ಬೀದಿಯಲ್ಲಿ ಹೋಗುವವರ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಆಗಲ್ಲ. ಈ ಆರೋಪ ಸುಳ್ಳು, ಸರ್ಕಾರವನ್ನು ಕವಲುದಾರಿಗೆ ತಳ್ಳಲು ಷಡ್ಯಂತ್ರ ರೂಪಿಸಲಾಗಿದೆ ಎಂದರು.
'ಹಾನಗಲ್ಗೆ ಕಳಿಸಿದ್ರೆ ಗೆಲ್ಲಿಸುತ್ತಿದ್ದೆ':
ಹಾನಗಲ್ಗೆ ಮೂರು ದಿನ ಮೊದಲು ನನ್ನನ್ನು ಕಳಿಸಿದ್ದರೆ ಅಲ್ಲಿಯೂ 10 ಸಾವಿರ ಅಂತರದಿಂದ ಗೆಲ್ಲುತ್ತಿದ್ದೆವು.ಆದರೆ ಜನರ ತೀರ್ಮಾನಕ್ಕೆ ತಲೆಬಾಗಿದ್ದೇವೆ. ಸೋಲನ್ನು ಒಪ್ಪಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ CM ಅವರನ್ನ ಬಲಿ ಪಡೆಯುತ್ತದೆ: ಶಾಸಕ ಪ್ರಿಯಾಂಕ್ ಖರ್ಗೆ