ಬೆಂಗಳೂರು: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಕೃತ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆ ನಡೆಸುತ್ತಿದ್ದ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಇಂದು ಕೊನೆಗೊಂಡಿದೆ.
ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿರುವ ಎಸ್ಬಿಐ ಬ್ಯಾಂಕ್ ಆವರಣದಲ್ಲಿ ಬೆಳಗ್ಗೆ 10 ರಿಂದ 12 ಗಂಟೆಯವರೆಗೂ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಐಕ್ಯ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್, ಇಂದೂ ಕೂಡಾ ಭಾರತದಾದ್ಯಂತ ಮುಷ್ಕರ ನಡೆದಿದೆ.
ನಿನ್ನೆಯ ಮುಷ್ಕರದ ಫಲಿತಾಂಶವಾಗಿ ಖಾಸಗೀಕರಣದ ಬಿಲ್ ಸದ್ಯಕ್ಕೆ ಲೋಕಸಭೆಯ ಚಳಿಗಾಲದ ಅಧಿವೇಶನಕ್ಕೆ ತರುವ ಮೊದಲು ಮರು ಪರಿಶೀಲನೆಗೆ ಒಪ್ಪಿಸಿದ್ದಾರೆ ಎಂಬ ಸುದ್ದಿ ಸಿಕ್ಕಿದೆ. ಸರ್ಕಾರದ ಈ ನಡೆಗೆ ಮುಷ್ಕರ ಕಾರಣ. ಈ ಮೂಲಕ ಮುಷ್ಕರ ಯಶಸ್ವಿಯಾಗಿದೆ ಎಂದರು.
ಇದನ್ನೂ ಓದಿ: ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಮುಷ್ಕರ: ದೇಶಾದ್ಯಂತ ಬ್ಯಾಂಕ್ ಸೇವೆಗಳು ಬಂದ್
ಆದರೆ, ಮುಂಬರುವ ಚುನಾವಣೆ ಹಿನ್ನಲೆ ಸದ್ಯಕ್ಕೆ ತಡೆಹಿಡಿಯುತ್ತಾರಾ ಎಂಬುದನ್ನು ಕೂಡಾ ನೋಡಬೇಕಾಗಿದೆ. ಇಂದು ಕೂಡಾ ಪ್ರತಿಭಟನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಶೇ.95 ಮಂದಿ ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ನಾಳೆ ಯಥಾಪ್ರಕಾರ ಬ್ಯಾಂಕ್ಗಳು ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.