ಬೆಂಗಳೂರು: ಕನ್ನಡ ಭಾಷಾ ಕೌಶಲ್ಯ ಆನ್ಲೈನ್ ಪರೀಕ್ಷೆ ತಂತ್ರಾಂಶ ಅಭಿವೃದ್ಧಿಯಿಂದ ಐಟಿ-ಬಿಟಿ ಸೇರಿದಂತೆ ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವಲ್ಲಿ ವಂಚಿತರಾಗುತ್ತಿರುವ ಬಹುತೇಕ ಕನ್ನಡಿಗರಿಗೆ ವರದಾನವಾಗಲಿದ್ದು, ರಾಜ್ಯೋತ್ಸವದ ವೇಳೆಗೆ ಇದಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಕನ್ನಡ ಭಾಷಾ ಕೌಶಲ್ಯ ಆನ್ಲೈನ್ ಪರೀಕ್ಷಾ ಯೋಜನೆ ಕುರಿತು ತಜ್ಞರೊಂದಿಗೆ ಜಾಲ ಸಂಪರ್ಕ (ಆನ್ಲೈನ್) ಸಭೆ ನಡೆಸಿದ ಅವರು, ಈ ಪರೀಕ್ಷಾ ತಂತ್ರಾಂಶ ಅಭಿವೃದ್ಧಿಯಿಂದ ಅನಿವಾಸಿ ಕನ್ನಡಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಉನ್ನತಮಟ್ಟದ ಅಧಿಕಾರಿಗಳಿಂದ ಕೆಳಹಂತದ ನೌಕರರು ಸೇರಿದಂತೆ ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿಯಬೇಕು ಎನ್ನುವುದು ಪ್ರಾಧಿಕಾರದ ಆಶಯ. ಈ ಉದ್ದೇಶದಿಂದ ಈ ಕೆಲಸವನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದ್ದು, ಕನ್ನಡ ಭಾಷಾ ಕೌಶಲ್ಯ ಆನ್ಲೈನ್ ಪರೀಕ್ಷೆ ತಂತ್ರಾಂಶ ಅಭಿವೃದ್ಧಿ ದೇಶಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ಆನ್ಲೈನ್ ಪರೀಕ್ಷೆ ಪಾಸು ಮಾಡುವವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದು ಉದ್ಯೋಗ ಪಡೆಯುವ ಸಂದರ್ಭದಲ್ಲಿ ಸಹಕಾರಿಯಾಗಲಿದೆ. ಹಾಗಾಗಿಯೇ ಪರೀಕ್ಷೆ ದೃಷ್ಟಿಯಿಂದ ಪಠ್ಯಕ್ರಮ, ಪಠ್ಯಬೋಧನೆ ಇತ್ಯಾದಿ ಸಾಧಕ-ಬಾಧಕಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ನಂತರ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಗಡಿನಾಡು, ಹೊರನಾಡು, ಹೊರದೇಶದ ಕನ್ನಡಿಗರಿಗೆ ಕನ್ನಡ ಕಲಿಕೆಯ ದೃಢೀಕರಣ ಬಯಸುವವರಿಗೆ ಕನ್ನಡ ಭಾಷಾ ಕೌಶಲ್ಯ ಆನ್ಲೈನ್ ಪರೀಕ್ಷೆ ಯೋಜನೆ ಅತ್ಯುತ್ತಮವಾದ ಸಾಧನವಾಲಿದೆ. ಇಂತಹ ಮಹತ್ವದ ಕಾರ್ಯಕ್ಕೆ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಅವರು ಪರೀಕ್ಷಾ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಭೆಯ ಗಮನ ಸೆಳೆದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಮತ್ತಿತರರು ಉಪಸ್ಥಿತರಿದ್ದರು.