ಬೆಂಗಳೂರು: ದಿನನಿತ್ಯದ ಚಿಲ್ಲರೆ ತರಕಾರಿ ವ್ಯಾಪಾರಿಗಳಿಗೆ ಬೆಳಗ್ಗೆ 6 ರಿಂದ 10 ಸಮಯ ನಿಗದಿ ಮಾಡಲಾಗಿದೆ. ಆದರೆ, ಹೋಲ್ಸೇಲ್ ವ್ಯಾಪಾರಿಗಳಿಗೆ ಸರಿಯಾದ ಮಾರ್ಗಸೂಚಿ ನೀಡಿಲ್ಲ ಎಂದು ಕಲಾಸಿಪಾಳ್ಯ ತರಕಾರಿ ಹಾಗೂ ಹಣ್ಣುಗಳ ಹೋಲ್ಸೇಲ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ಗೋಪಿ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ನಗರದಿಂದ 25 ಕಿ.ಮೀ ದೂರಕ್ಕೆ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ. ಅಲ್ಲಿಗೆ ತೆರಳಲು ಬಸ್ಸು, ಆಟೋಗಳಿಲ್ಲ. ಖಾಸಗಿ ವಾಹನಗಳಲ್ಲಿ ಹೋದರೆ ಪೊಲೀಸರು ಸೀಜ್ ಮಾಡುತ್ತಾರೆ. ಪಾಸ್ಗಳನ್ನೂ ನೀಡಿಲ್ಲ. ಮಧ್ಯಾಹ್ನದವರೆಗೆಯಾದರೂ ಹೋಗುವುದಕ್ಕೆ, ಬರುವುದಕ್ಕೆ ಅನುಮತಿ ಬೇಕಾಗುತ್ತದೆ. ಗ್ರಾಹಕರಿಗೂ ಹೋಗಿಬರಲು ಅನುಕೂಲ ಇಲ್ಲ. ಹೀಗಾಗಿ, ಕಲಾಸಿಪಾಳ್ಯದಲ್ಲೇ ವ್ಯಾಪಾರ ನಡೆಸಲು ಸಮಯಾವಕಾಶ ನಿಗದಿ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ. ಸ್ವಂತ ಬಂಡವಾಳದಿಂದ ಶೆಡ್ ಹಾಕಲಾಗ್ತಿದೆ. ಆದರೆ, ಹೋಗಿ ಬರಲು ವ್ಯವಸ್ಥೆಗಳಿಲ್ಲ. ಹಮಾಲಿಗಳು, ರೈತರು, ಗ್ರಾಹಕರಿಗೂ ಬರಲು ಸಾಧ್ಯವಿಲ್ಲ. ಇದಕ್ಕಿಂತ ಸಂಪೂರ್ಣವಾಗಿ ಬಂದ್ ಮಾಡಿ ಎಂದು ಬೇಸರ ವ್ಯಕ್ತಪಡಿಸಿದರು.
ಓದಿ: ಬುದ್ಧಿ ಹೇಳಿದ್ದಕ್ಕೆ ಸಿಟ್ಟು: ಅಪ್ಪ-ಅಮ್ಮನನ್ನೇ ಕೊಂದ 14 ವರ್ಷದ ಬಾಲಕ!
ಮೇ 10 ರಿಂದ ಮೇ 24ರ ವರೆಗೆ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಈ ವೇಳೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ವ್ಯಾಪಾರಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ.