ಬೆಂಗಳೂರು : ನಾವು ಹಿಂದೆ ವಿಪಕ್ಷ ಸ್ಥಾನದಲ್ಲಿ ಇದ್ದಾಗ ಸರಿಯಾಗಿ ಕೆಲಸ ಮಾಡಿದ್ದೇವೆ. ಅದರ ಪರಿಣಾಮವಾಗಿ ಅಧಿಕಾರಕ್ಕೆ ಬಂದೆವು. ಈಗ ಕಾಂಗ್ರೆಸ್ ಚುನಾವಣೆಗಾಗಿ ಬಿಟ್ ಕಾಯಿನ್ ವಿಚಾರ (congress bitcoin allegation) ಮಾತಾಡ್ತಾ ಇದೆ. ಸೋತು ಹೋದ್ರೂ ಇನ್ನೂ ಕಾಂಗ್ರೆಸ್ ಬುದ್ಧಿ ಕಲಿತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಮೇಲೆ ತಪ್ಪು ತೋರಿಸಲು ಕಾಂಗ್ರೆಸ್ ದೊಡ್ಡ ಶಬ್ದ ಮಾಡ್ತಿದೆ. ಖಾಲಿ ಡಬ್ಬ ಹೊಡೆದರೆ ಭಾರೀ ಶಬ್ದ ಆಗುತ್ತದೆ. ತುಂಬಿದ ಕೊಡಕ್ಕೆ ಹೊಡೆದರೆ ಶಬ್ದ ಆಗಲ್ಲ. ಕಾಂಗ್ರೆಸ್ ಹೇಳಿಕೆ ಖಾಲಿ ಡಬ್ಬ ಶಬ್ಧ ಮಾಡಲಿಕ್ಕೆ ಹೊಡೆದ ರೀತಿ ಅಷ್ಟೇ..
ಬಿಜೆಪಿ ತಪ್ಪು ಮಾಡಿದೆ ಅಂತಾ ಒಂದು ಸಬ್ಜೆಕ್ಟ್ ತೋರಿಸಲಿ ನೋಡೋಣ. ಕಾಂಗ್ರೆಸ್ಗೆ ಮಾತಾಡಲು ಯಾವುದಾದರೂ ಒಂದು ವಿಷಯ ಬೇಕು. ಈಗ ಬಿಟ್ ಕಾಯಿನ್ (eshwarappa statement on bitcoin scam) ಹಿಡಿದುಕೊಂಡಿದ್ದಾರೆ. ಸ್ವಲ್ಪ ದಿನದ ಮೊದಲು ಜಾತಿ ಗಣತಿ ವಿಚಾರ ಮಾತನಾಡುತ್ತಿದ್ದರು. ಈಗ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಾ ಇದ್ದಾರೆ ಎಂದರು.
ಬೊಮ್ಮಾಯಿ ಪರ ಕೆಎಸ್ಈ ಬ್ಯಾಟಿಂಗ್: ಸಿಎಂ ಬೊಮ್ಮಾಯಿ ಪರ ನಾವೆಲ್ಲರೂ ಇದ್ದೇವೆ. ನಮ್ಮ ಹೈಕಮಾಂಡ್ ಬಹಳ ಸ್ಪಷ್ಟವಾಗಿದೆ. ಬೊಮ್ಮಾಯಿಗೆ ಉತ್ತಮವಾಗಿ ಕೆಲಸ ಮಾಡಿ ಎಂದು ಹೇಳಿ ಕಳಿಸಿದೆ. ಹೈಕಮಾಂಡ್ ಎಷ್ಟು ಗಟ್ಟಿ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಏನಾದರೂ ಮಾಡಬೇಕು ಅನ್ನಿಸಿದರೆ ಕ್ಷಣ ಮಾತ್ರದಲ್ಲಿ ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬೊಮ್ಮಾಯಿಯವರನ್ನ ಸಮರ್ಥಿಸಿಕೊಂಡರು.
ಮುಂದೆ ಚುನಾವಣೆ ಬರ್ಲಿ ನೋಡೋಣ: ಕಾಂಗ್ರೆಸ್ ಅಂದ್ರೆ ಬುಡುಬುಡಿಕೆ ಎನ್ನುವುದಕ್ಕೆ ಅಳತೆ ಗೋಲು ಚುನಾವಣೆ. ಹಿಂದೆ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನದಲ್ಲಿ ಒಂದು ಸೀಟು ಗೆಲ್ಲಲ್ಲ ಅಂದಿದ್ದರು. ಆದರೆ, ಅವರು ಒಂದು ಗೆದ್ದರು, ನಾವು 25 ಸೀಟು ಗೆದ್ದೆವು. ವಿಧಾನಸಭೆ ಚುನಾವಣೆಯಲ್ಲಿ ನಾನೇ ಸಿಎಂ ಅಂತಾ ಸಿದ್ದರಾಮಯ್ಯ ಅಂದಿದ್ದರು.
ಆದರೆ, ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಸೋತರು. ಮೂರು ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ನವರು ಸೋತರು. ಹಾನಗಲ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅದನ್ನೇ ದೊಡ್ಡದಾಗಿ ಹೇಳಿಕೊಂಡು ಬರುತ್ತಿದೆ. ಮುಂದೆ ಬರಲಿ ಚುನಾವಣೆಗೆ ನೋಡೋಣ ಆಗ ಗೊತ್ತಾಗುತ್ತದೆ ಎಂದು ಸವಾಲೆಸೆದರು.