ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ನೀಡಿರುವ ಮೀಸಲಾತಿಯನ್ನು ಖಾತರಿಪಡಿಸಲು ಹಾಗು ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ರಚಿಸಲಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಭಕ್ತವತ್ಸಲ ನೇತೃತ್ವದ ಆಯೋಗ ನಿನ್ನೆ ಸಲ್ಲಿಸಿದ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್ ಪುನರ್ ವಿಂಗಡಣೆ ವರದಿ ಮತ್ತು ನ್ಯಾ.ಭಕ್ತವತ್ಸಲ ಸಮಿತಿ ವರದಿಯನ್ನು ಶುಕ್ರವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಜುಲೈ 22ರೊಳಗೆ ವರದಿ ತೆಗೆದುಕೊಳ್ಳಲು ಕೋರ್ಟ್ ಸೂಚಿಸಿತ್ತು. ಅದರಂತೆ ನಿಗದಿತ ಸಮಯದಲ್ಲಿ ಸಮಿತಿ ಎರಡೂ ವರದಿ ಕೊಟ್ಟಿದೆ. ಕೋರ್ಟ್ ನಿರ್ದೇಶನ ಆಧರಿಸಿ ಮುಂದಿನ ತೀರ್ಮಾನ ಆಗುತ್ತದೆ ಎಂದರು.
ಬಿಜೆಪಿ ಸಾಧನಾ ಸಮಾವೇಶ: ಜುಲೈ 28ಕ್ಕೆ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಸುವ ಕುರಿತು ಚರ್ಚೆ ಮಾಡುತ್ತಿದ್ದೇವೆ. ಇದನ್ನು ದೆಹಲಿಗೆ ತೆರಳಿ ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.
'ಕಾಂಗ್ರೆಸ್‌ನ ರಾಜಕೀಯ ದಿವಾಳಿತನ': ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಾರು ಸುಟ್ಟ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ದೇಶದಲ್ಲಿ ನಗೆಪಾಟಲಿಗೀಡಾಗಿದೆ. ಕಾಂಗ್ರೆಸ್‌ನವರು ಏನನ್ನು ಬಿಂಬಿಸಲು ಹೊರಟಿದ್ದಾರೋ ಗೊತ್ತಿಲ್ಲ. ರಾಜಕೀಯ ದಿವಾಳಿತನ ಇದು. ಈ ತರಹ ಹಿಂದೆಂದೂ ನಾನು ಕೇಳಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಮೇಯರ್,ಉಪ ಮೇಯರ್ ಅವದಿ 30 ತಿಂಗಳಿಗೆ ಹೆಚ್ಚಿಸಿ ವರದಿ ಸಲ್ಲಿಸಿದ ನ್ಯಾ.ಭಕ್ತವತ್ಸಲ ಆಯೋಗ..!