ಬೆಂಗಳೂರು : ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತಿರುವ ಜೆಡಿಎಸ್, 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಹಿಂದೇಟು ಹಾಕುತ್ತಿರುವುದೇಕೆ? ಎಂಬ ಪ್ರಶ್ನೆ ಮೂಡಿದೆ. 2021, ಅಕ್ಟೋಬರ್ನಲ್ಲಿ ಬಿಡದಿಯಲ್ಲಿ ಜನತಾ ಪರ್ವ 1.0 ಕಾರ್ಯಗಾರ ನಡೆಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.
ಆ ಕಾರ್ಯಾಗಾರದಲ್ಲಿ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳಾಗುವವರಿಗೆ ಪ್ರಶ್ನಾವಳಿಗಳನ್ನು ನೀಡಲಾಗಿತ್ತು. ಅಭ್ಯರ್ಥಿಗಳು ನೀಡುವ ಉತ್ತರಗಳ ಮೌಲ್ಯಮಾಪನ ಮಾಡಿ ಸಂಕ್ರಾಂತಿ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಾಗಿ ಜೆಡಿಎಸ್ ವರಿಷ್ಠರು ಘೋಷಿಸಿದ್ದರು. ಆದರೆ, ಕೋವಿಡ್ ಮೂರನೇ ಅಲೆ ಉಲ್ಬಣವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದನ್ನು ಮುಂದೂಡಲಾಗಿತ್ತು.
ಕೋವಿಡ್ ಸೋಂಕಿನ ಪ್ರಮಾಣ ತಗ್ಗಿದ್ದರೂ ಶಿವರಾತ್ರಿ ಹಬ್ಬದ ನಂತರವೂ ಪಟ್ಟಿ ಪ್ರಕಟಿಸಲಿಲ್ಲ. ಅಷ್ಟರಲ್ಲೇ ರಾಜ್ಯದಲ್ಲಿ ಹಿಜಾಬ್ ಮತ್ತಿತರ ವಿಚಾರಗಳು ಮುನ್ನೆಲೆಗೆ ಬಂತು. ಜತೆಗೆ ಬಜೆಟ್ ಅಧಿವೇಶನ ಬಂದಿದ್ದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜೆಡಿಎಸ್ ಹಿಂದೇಟು ಹಾಕಿದೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಮತ್ತೊಂದು ಕಾರ್ಯಾಗಾರ ನಡೆಸಿ ಚುನವಾಣೆ ಸಿದ್ಧತೆ ಬಗ್ಗೆ ಮಾರ್ಗದರ್ಶನ ಮಾಡಲಾಗಿತ್ತು.
ಆದರೂ ವಿಧಾನಸಭೆಗಳ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಹಿನ್ನಡೆ ಅನುಭವಿಸಿತ್ತು. ಹಾಗಾಗಿ, ಪಟ್ಟಿ ಬಿಡುಗಡೆ ಮಾಡುವ ನಿರ್ಧಾರವನ್ನು ಕೈಬಿಟ್ಟಿತು. ಈಗ ಯುಗಾದಿ ಹಬ್ಬವೂ ಮುಗಿದಿದೆ. ಹಾಗೆಯೇ ಬಹುನಿರೀಕ್ಷಿತ ಹಾಗೂ ಮಹತ್ವದ 'ಜನತಾ ಜಲಧಾರೆ' ಕಾರ್ಯಕ್ರಮವನ್ನೂ ಮುಂದೂಡುತ್ತಾ ಬಂದಿದೆ. ಏಪ್ರಿಲ್ 16 ಹುನುಮ ಜಯಂತಿಯಂದು ಜನತಾ ಜಲಧಾರೆ ಕಾರ್ಯಕ್ರಮ ಆರಂಭಿಸುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ. ಆ ಸಂದರ್ಭದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದಿವೆ. ಆದರೆ, ಜೆಡಿಎಸ್ 123 ಸ್ಥಾನಗಳ ಗುರಿಯೊಂದಿಗೆ ನೀರಾವರಿ ಯೋಜನೆಗಳ ಅನುಷ್ಠಾನ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕಾಗಿರುವ ಅನ್ಯಾಯದ ಜತೆಗೆ ಕನ್ನಡಿಗರ ಸ್ವಾಭಿಮಾನವನ್ನು ಮುಂದಿಟ್ಟು ಚುನಾವಣೆ ಎದುರಿಸಲು ಜೆಡಿಎಸ್ ನಿರ್ಧರಿಸಿದೆ.
ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿದ್ದು, ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಜೆಡಿಎಸ್ ವರಿಷ್ಠರು ಅಂತಹ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಚುನಾವಣಾ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಮುಂಬರುವ ವಿಧಾನಸಭೆ ಚುನವಾಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆಯಿಲ್ಲದೆ ಏಕಾಂಗಿ ಹೋರಾಟ ನಡೆಸಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಅಚಲ ವಿಶ್ವಾಸವನ್ನು ಜೆಡಿಎಸ್ ಹೊಂದಿದೆ.
ಅದಕ್ಕಾಗಿ ನಾನಾ ರೀತಿಯ ಪ್ಲಾನ್ ಮಾಡುತ್ತಿದ್ದು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳನ್ನು ಒಗ್ಗೂಡಿಸಿ ತನ್ನತ್ತ ಸೆಳೆಯಲು ಮುಂದಾಗಿದೆ. ಇದೀಗ ಜನತಾ ಜಲಧಾರೆ ಆರಂಭವಾಗುವ ವೇಳೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುತ್ತದೆಯೋ ಅಥವಾ ಮತ್ತೆ ಮುಂದೂಡಲಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಒಡಕಿನ ದನಿ ಲಾಭವಾಗಿಸಿಕೊಳ್ಳಲು ಜೆಡಿಎಸ್ ತಂತ್ರ.. ಅಲ್ಪಸಂಖ್ಯಾತ ಮುಖಂಡರಿಗೆ 'ತೆನೆ' ಗಾಳ!?