ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರನ್ನು ಜೆಡಿಎಸ್ ಪಕ್ಷದವರು ಎಂದು ನೋಡದೆ, ಮೂರೂ ಪಕ್ಷಗಳು ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಜೆಡಿಎಸ್ ಹಿರಿಯ ಮುಖಂಡ ವೈಎಸ್ವಿ ದತ್ತ ಮನವಿ ಮಾಡಿದರು.
ಕಾಂಗ್ರೆಸ್ನಿಂದಲೂ ಸಭಾಪತಿ ಚುನಾವಣೆಗೆ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್, ಬಿಜೆಪಿ ಎನ್ನದೇ ಹೊರಟ್ಟಿಯನ್ನು ಎಲ್ಲರೂ ಬೆಂಬಲಿಸಬೇಕು. ಅವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸಬಾರದು. ಸತತ ಏಳು ಬಾರಿ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಬಂದಿದ್ದಾರೆ. ಅವರೊಬ್ಬ ಹಿರಿಯ ನಾಯಕರು. ಮೂರೂ ಪಕ್ಷಗಳು ನಮ್ಮ ಅಭ್ಯರ್ಥಿ ಎಂದೇ ಭಾವಿಸಿ ಮತ ಹಾಕಬೇಕು. ಇಲ್ಲಿ ಯಾರೂ ಪಕ್ಷ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ನಿಲುವು ಸ್ಪಷ್ಟವಾಗಿದೆ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ನಾವು ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಿದ್ದೇವೆ ಅಷ್ಟೆ. ಕಾಯ್ದೆಯನ್ನು ಜಾರಿಗೆ ತಂದರೆ, ರೈತಾಪಿ ಜನರ ಬದುಕು ತುಂಬಾ ಕಷ್ಟವಾಗಲಿದೆ. ಮೊದಲು ಕಾಯ್ದೆಯ ಸಾಧಕ-ಬಾಧಕ ಯೋಚನೆ ಮಾಡಬೇಕು. ಹಠಕ್ಕೆ ಬಿದ್ದು ಕಾಯ್ದೆ ತರುವುದು ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ...ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ನಾಮಪತ್ರ ಸಲ್ಲಿಕೆ
ಸರ್ವೆಯರ್‌ಗಳ ಸ್ಥಿತಿ ಅತಂತ್ರ: ನನ್ನನ್ನು ಪರವಾನಗಿ ಸರ್ವೇಯರ್ಗಳ ಸಂಘದ ಗೌರವಾಧ್ಯಕ್ಷರನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ ಸರ್ವೆಯರ್‌ಗಳ ಸ್ಥಿತಿ ಅತಂತ್ರವಾಗಿದೆ. ಈಗಾಗಲೇ ಅನೇಕ ಮಂದಿ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದು ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ದತ್ತ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಿ.ಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಅಶೋಕ್ ಅವರನ್ನು ಭೇಟಿಯಾಗಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದೇನೆ. ಈ ಕುರಿತು ನಾಳೆ ರಾಜ್ಯಾದ್ಯಂತ ಮತ್ತು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ. ಸರ್ಕಾರಕ್ಕೆ ಫೆ.16ರವರೆಗೆ ಕಾಲಾವಕಾಶ ನೀಡುತ್ತೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.