ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳ ಸಭೆ ನಡೆಯಿತು. ಬಿಬಿಎಂಪಿ ಚುನಾವಣೆಗೆ ತಯಾರಿ, ಅಭ್ಯರ್ಥಿಗಳ ಆಯ್ಕೆ ಮತ್ತಿತರ ವಿಷಯಗಳ ಕುರಿತು ಅಧ್ಯಕ್ಷರುಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಎಂ. ಇಬ್ರಾಹಿಂ ಅವರು, ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ. ಶನಿವಾರ ಬೆಂಗಳೂರು ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರ ಸಭೆ ನಡೆಸಿದ್ದೇವೆ. ಬಿಬಿಎಂಪಿ ಚುನಾವಣೆಯ ನೋಟಿಫಿಕೇಷನ್ ಹೊರ ಬರುತ್ತಿದ್ದಂತೆಯೇ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯಸಭೆಯಲ್ಲಿ ನಮ್ಮನ್ನು ಸೋಲಿಸಿ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಕಾಂಗ್ರೆಸ್‌ನವರು ಅಂದುಕೊಂಡಿದ್ದಾರೆ. ಬಿಜೆಪಿಗೆ ಸಹಾಯ ಮಾಡುವ ಮೂಲಕ ನಮಗೆ ಶಕ್ತಿ ಕೊಟ್ಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಂದೇ ನಾಣ್ಯದ ಎರಡು ಮುಖಗಳೆಂದು ಅವರೇ ಸಾಬೀತು ಮಾಡಿಕೊಂಡಿದ್ದಾರೆ. ಜನ ನಮಗೆ ಮಾನ್ಯತೆ ಮಾಡಿದ್ದಾರೆ ಎಂದು ಹೇಳಿದರು.
ಶಾಸಕರಿಗೆ ನೋಟಿಸ್: ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರಿಗೆ ನೋಟಿಸ್ ನೀಡಿದ್ದೇವೆ. ಕಾಂಗ್ರೆಸ್ ವೋಟ್ ಕೊಟ್ಟು ಬಿಜೆಪಿಗೆ ಎರಡನೇ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಬಿಜೆಪಿಗೆ ವೋಟ್ ಕೊಟ್ಟು ಕಾಂಗ್ರೆಸ್‌ಗೆ ಎರಡನೇ ಪ್ರಾಶಸ್ತ್ಯ ಹಾಕಿದ್ದಾರೆ. ಎರಡು ಬ್ಯಾಲೆಟ್ ಪೇಪರ್‌ನಲ್ಲಿ ಅಲ್ಲಿ ಕೂತಿದ್ದ ಏಜೆಂಟರು ರಿಪೋರ್ಟ್ ಮಾಡಿದ್ದಾರೆ ಎಂದರು.
ಎಂಥಾ ದುರ್ದೈವ, ಕೋಮುವಾದಿಗಳನ್ನು ಸೋಲಿಸಬೇಕೆಂದು ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪಕ್ಷ. ಇವತ್ತು ಬಿಜೆಪಿ ಗೆಲ್ಲಿಸಬೇಕೆಂದು ಮಾಡಿಕೊಂಡಿರುವ ಡೀಲ್ ರಾಜ್ಯದ ಜನತೆ ಮುಂದೆ ನಗ್ನ ಸತ್ಯವಾಗಿದೆ. ಗಾಂಧಿ ಬಗ್ಗೆ ಮಾತನಾಡುವ ಪಕ್ಷ ನಾತೂರಾಮ್ ಗೋಡ್ಸೆ ಪಕ್ಷಕ್ಕೆ ಮತ ಹಾಕಿಸಿದೆ. ಇವರು ಜಾತ್ಯಾತೀತ ತತ್ವ ಹೇಳುವಂತವರಾ? ಎಂದು ಪ್ರಶ್ನಿಸಿದರು.
ಓದಿ: ಬಿಜೆಪಿಯವರು ಕಳಿಸುವ ಬಳಸಿದ ಚಡ್ಡಿಗಳನ್ನು ನಾವು ಮೋದಿಗೆ ರವಾನಿಸುತ್ತೇವೆ: ಪ್ರಿಯಾಂಕ್ ಖರ್ಗೆ