ಬೆಂಗಳೂರು: ನಮ್ಮ ನೋವನ್ನು ಹೇಳಲು ಅವಕಾಶ ಕೊಡಿ. ನಾನು ಅನುದಾನ ಕೇಳಿಲ್ಲ. ಹಕ್ಕುಚ್ಯುತಿ ಪ್ರಸ್ತಾವನೆಗೆ ಅವಕಾಶ ನೀಡದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಬೆದರಿಕೆ ಹಾಕಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶಾಸಕ ಸಾ.ರಾ.ಮಹೇಶ್ ಮನವಿ ಮಾಡಿದರು. ಆಗ, ನಿಮ್ಮ ಹಕ್ಕುಚ್ಯುತಿಯನ್ನು ಗಮನಿಸಿದ್ದೇನೆ. ಅದಕ್ಕೆ ನಾನು ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಕಾಗೇರಿ ಹೇಳಿದರು. ಅದಕ್ಕೆ ಮತ್ತೆ ಜೆಡಿಎಸ್‌ನ ಸದಸ್ಯ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಡಾ.ಅನ್ನದಾನಿ, ಪುಟ್ಟರಾಜು ಸೇರಿದಂತೆ ಮತ್ತಿತರರು ಆಕ್ಷೇಪಿಸಿ ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.
ಇದು ನನ್ನ ಹಕ್ಕುಚ್ಯುತಿಯ ಪ್ರಶ್ನೆ. ನಮ್ಮನ್ನು ರಕ್ಷಣೆ ಮಾಡದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸದನದ ಬಾವಿಗಿಳಿದು ಧರಣಿ ನಡೆಸಲು ಸಾ.ರಾ.ಮಹೇಶ್ ಮುಂದಾದರು.
ಈ ವೇಳೆ ಮಾತನಾಡಿದ ಸ್ಪೀಕರ್, ನಾನು ಚರ್ಚೆಗೆ ಅವಕಾಶ ಕೊಡುವುದಿಲ್ಲವೆಂದು ಹೇಳಿಲ್ಲ. ನಾಳೆ ಅಥವಾ ನಾಡಿದ್ದು ಕೊಡುತ್ತೇನೆ ಎಂದು ಹೇಳಿದ್ದೇನೆ. ನೀವು ಇಂತಹ ಸಮಯಕ್ಕೆ ಕೊಡಬೇಕೆಂದು ಸ್ಪೀಕರ್ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಸ್ಪೀಕರ್ ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಚರ್ಚೆಗೆ ಅವಕಾಶ ಕೊಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದಕ್ಕೆ ಸಭಾಧ್ಯಕ್ಷರು ಸಮ್ಮತಿಸಿದ್ದರಿಂದ ಜೆಡಿಎಸ್ ಸದಸ್ಯರು ಸರಣಿಯನ್ನು ಕೈಬಿಟ್ಟರು.
ಮೈಶುಗರ್ ಕಾರ್ಖಾನೆ ಕುರಿತು ಚರ್ಚೆಗೆ ಅವಕಾಶ:
ಇದೇ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಡಾ.ಅನ್ನದಾನಿ ಅವರು ಮಂಡ್ಯ ಜಿಲ್ಲೆ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಕುರಿತಂತೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ಶತಮಾನಗಳ ಇತಿಹಾಸವುಳ್ಳ ಐತಿಹಾಸಿಕ ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಇದನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸದೆ ಸರ್ಕಾರದ ಸ್ವಾಮ್ಯದಲ್ಲೇ ನಡೆಯಬೇಕೆಂದು ಒತ್ತಾಯಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಬಜೆಟ್‍ನಲ್ಲಿ 100 ಕೋಟಿ ಅನುದಾನವನ್ನು ನೀಡಿದ್ದರು. ಈ ಸಕ್ಕರೆ ಕಾರ್ಖಾನೆಗೂ, ಮಂಡ್ಯಕ್ಕೂ ಅವಿನಾಭಾವ ಸಂಬಂಧವಿದೆ. ರೈತರು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಚರ್ಚೆಗೆ ಅವಕಾಶ ಕೊಡಬೇಕೆಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು.
ಅನ್ನದಾನಿ ಅವರ ಮಾತಿಗೆ ಜೆಡಿಎಸ್‍ನ ಡಿ.ಸಿ.ತಮ್ಮಣ್ಣ , ಪುಟ್ಟರಾಜು ಸೇರಿದಂತೆ ಮತ್ತಿತರರು ದನಿಗೂಡಿಸಿದರು. ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.