ಬೆಂಗಳೂರು : ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ- ಗಂಗಾ ರಥಯಾತ್ರೆಗೆ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯುತ್ತಿದೆ. ಶಾಸ್ತ್ರೋಕ್ತವಾಗಿ ಮೆರವಣಿಗೆ ಮೂಲಕ ಪುಣ್ಯಜಲವನ್ನು ಸಂಗ್ರಹ ಮಾಡುವ ಕಾರ್ಯಕ್ರಮವನ್ನು ಜೆಡಿಎಸ್ ಹಮ್ಮಿಕೊಂಡಿದೆ.
ಈ ಕುರಿತು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು, ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮಾವತಿಯಲ್ಲಿ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ತದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಿದ್ದಾರೆ.
ಅನಿತಾ ಕುಮಾರಸ್ವಾಮಿ, ಶಾಸಕ ಎ.ಮಂಜುನಾಥ್ ಹಾಗೂ ಹಲವು ಮುಖಂಡರು ಮೇಕೆದಾಟುನಲ್ಲಿ ಕಾವೇರಿ ನದಿ ನೀರು ಸಂಗ್ರಹ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಹೀಗೆ ಹಲವು ನಾಯಕರು ಹಲವು ಕಡೆಗಳಲ್ಲಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಜ್ಯದ ಹದಿನೈದು ಕಡೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ.
ಹನುಮ ಜಯಂತಿಯ ದಿನವಾದ ಇಂದು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಈ ಕಾರ್ಯ ಆರಂಭ ಮಾಡಿದ್ದೇವೆ. ಮೇ 8ರವರೆಗೆ ನಡೆಯಲಿರುವ ಈ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಿ ಕೊಂಡು ಬೆಂಗಳೂರಿಗೆ ಬರಲಾಗುತ್ತದೆ. ಉಳಿದ ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ಜಲಸಂಗ್ರಹ ಮಾಡಲಿದ್ದಾರೆ ಎಂದು ತಿಳಿಸಿದರು.
ನಾಳೆ ಸಿ ಎಂ ಇಬ್ರಾಹಿಂ ಪದಗ್ರಹಣ : ನಾಳೆ ಸಿ ಎಂ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಹೆಚ್ ಕೆ ಕುಮಾರಸ್ವಾಮಿ ಅವರು ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿಸಿದರು. ನಾಳೆ ಬೆಳಗ್ಗೆ 10.15ಕ್ಕೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಕಬಿನಿ ಜಲಾಶಯದಲ್ಲಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ :
ಮೈಸೂರು : ಕಬಿನಿ ಜಲಾಶಯದಲ್ಲಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಜಲಧಾರೆ ವಾಹನ ಹಾಗೂ ಕಳಸಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಕಬಿನಿ ಜಲಾಶಯದಿಂದ ತಂದಿದ್ದ ನೀರಿಗೆ ಪೂಜೆಯನ್ನು ಸಲ್ಲಿಸಿ ನಂತರ ಜಲಧಾರೆ ವಾಹನದಲ್ಲಿ ಇರುವ ದೊಡ್ಡ ಕಳಸಕ್ಕೆ ಹೆಚ್ ಡಿ ದೇವೇಗೌಡ ಅವರು ನೀರನ್ನು ಸಂಗ್ರಹ ಮಾಡಿದರು.
ಈ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಎಂಎಲ್ಸಿ ಅಶ್ವಿನ್‌ಕುಮಾರ್, ಎಂಎಲ್ಸಿ ಮಂಜೇಗೌಡ, ಮಾಜಿ ಶಾಸಕರಾದ ಟಿ ಬಿ ಚಿಕ್ಕಣ್ಣ, ಶರವಣ ಸೇರಿದಂತೆ ಸ್ಥಳೀಯ ಮುಖಂಡರು ಭಾಹಿಯಾಗಿದ್ದರು. ಕಬಿನಿ ಜಲಾಶಯದಲ್ಲಿ ಜಲಧಾರೆ ಯಾತ್ರೆಗೆ ಚಾಲನೆ ನೀಡಿದ ಬಳಿಕ ನಂತರ ದೇವೇಗೌಡರವರು ಹೆಲಿಕಾಪ್ಟರ್‌ನಲ್ಲಿ ಕೆಆರ್‌ಎಸ್‌ಗೆ ತೆರಳಿದರು.
ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮ :
ಕೊಪ್ಪಳ : ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿ ಜೆಡಿಎಸ್ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದೆ. ಅಣೆಕಟ್ಟಿನಲ್ಲಿನ ನೀರಿಗೆ ಪೂಜೆ ಸಲ್ಲಿಸಿ 11 ಕೊಡಗಳಲ್ಲಿ ನೀರು ಸಂಗ್ರಹಿಸಿದ ಮುತ್ತೈದೆಯರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ನಾಡಿನ ನೀರಾವರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಲ್ಲಿ ಸಂಗ್ರಹಿಸಿದ ನೀರು ವಿಜಯನಗರ ಕೊಪ್ಪಳ ಬಳ್ಳಾರಿ ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿ ಬೆಂಗಳೂರಿಗೆ ತಲುಪಲಿದೆ. ಬಳಿಕ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಈ ನೀರನ್ನು ಇಟ್ಟು ಒಂದು ವರ್ಷ ಪೂಜೆ ಮಾಡಲಾಗುವುದು ಎಂದು ಹೇಳಲಾಗಿದೆ.
ಮಾಜಿ ಪಿಎಂ ಹೆಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಣತಿಯಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಸಮಸ್ಯೆಗೆ ಮುಕ್ತಿ, ಕುಡಿಯುವ ನೀರು ರೈತರ ನೀರಾವರಿಯ ಎಲ್ಲಾ ಸಮಸ್ಯೆಗಳನ್ನು 5 ವರ್ಷಗಳಲ್ಲಿ ಬಗೆಹರಿಸಲಾಗುವುದು ಎನ್ನುವುದರ ಮುನ್ನುಡಿಯೇ ಈ ಜನತಾ ಜಲಧಾರೆ ಕಾರ್ಯಕ್ರಮ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಓದಿ : ರಾಜಕಾರಣದಲ್ಲಿ ಯಾರು ಸತ್ಯವಂತರು?: ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಶ್ನೆ