ಬೆಂಗಳೂರು: ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಮುಂದಿನ ಚುನಾವಣೆ, ಪಂಚರತ್ನ ಕಾರ್ಯಕ್ರಮಗಳ ಕುರಿತು ಬುಧವಾರ ಸಂಜೆ ದೇವನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿದೆ. ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಾಲಿ ಶಾಸಕರು, ಮಾಜಿ ಶಾಸಕರು ಸಭೆಯಲ್ಲಿದ್ದರು.
ಸಭೆಯ ಪ್ರಮುಖ ನಿರ್ಣಯಗಳು: ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವರು, ಹಾಲಿ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಅವರವರ ಕ್ಷೇತ್ರದ ಜೊತೆಗೆ 2-3 ಕ್ಷೇತ್ರಗಳ ಜವಾಬ್ದಾರಿ ಹೊರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳೆದ 2018ರ ಮೈತ್ರಿ ಸರ್ಕಾರದ ನಂತರ ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಪಕ್ಷ ಬಿಟ್ಟು ಹೋಗುವಂತಹ ಹಾಗೂ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ಮುಖಂಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು, ಅವರ ಮನವೊಲಿಸಲು ಕೆಲ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ಅಧಿಕಾರವನ್ನು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ನೀಡಲು ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದೆ.
ಇದನ್ನೂ ಓದಿ: 90ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ದೇವೇಗೌಡ..ಹಿರಿಯ ಮುತ್ಸದ್ಧಿಯ ರಾಜಕೀಯ ಹೆಜ್ಜೆಗುರುತುಗಳು