ಬೆಂಗಳೂರು: ಪಕ್ಷದ ಪ್ರಾಥಮಿಕ, ಬ್ಲಾಕ್, ಜಿಲ್ಲಾಮಟ್ಟ ಸೇರಿದಂತೆ ವಿವಿಧ ಹಂತದ ಸಾಂಸ್ಥಿಕ ಚುನಾವಣೆಯ ವೇಳಾಪಟ್ಟಿಯನ್ನು ಜೆಡಿಎಸ್ ಇಂದು ಪ್ರಕಟಿಸಿದೆ. ಪಕ್ಷದ ಚುನಾವಣಾಧಿಕಾರಿ ಎಚ್.ಸಿ. ನೀರಾವರಿ ಅವರು ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಮತ್ತು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಜನವರಿ 12 ರಿಂದ ಮಾರ್ಚ್ 5 ರವರೆಗೂ ವಿವಿಧ ಹಂತದ ಸಾಂಸ್ಥಿಕ ಚುನಾವಣೆ ನಡೆಯಲಿದೆ. ಮೊದಲಿಗೆ ಪ್ರಾಥಮಿಕ ಸಮಿತಿಗಳ ಸಾಂಸ್ಥಿಕ ಚುನಾವಣೆಯನ್ನು ಜನವರಿ 12 ರಿಂದ ಜ.25 ರವರೆಗೆ, ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫೆ.1 ರಿಂದ ಫೆ.13 ರವರೆಗೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲಾಮಟ್ಟದ ಸಂಸ್ಥೆಗಳ ಚುನಾವಣೆಯನ್ನು ಫೆ.15 ರಿಂದ ಫೆ.27 ರವರೆಗೆ, ರಾಷ್ಟ್ರೀಯ ಪರಿಷತ್ ಸದಸ್ಯರ ಚುನಾವಣೆಯನ್ನು ಮಾ.1 ರಂದು ಹಾಗೂ ಪ್ರದೇಶ ಅಧ್ಯಕ್ಷರು, ಕಾರ್ಯಕಾರಿಣಿ ಸದಸ್ಯರ ಚುನಾವಣೆಯನ್ನು ಮಾ.5 ರಂದು ನಡೆಸಲು ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆ, ಕೋವಿಡ್ ಕಾರಣದಿಂದಾಗಿ ಸಕಾಲದಲ್ಲಿ ಸಾಂಸ್ಥಿಕ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಈಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕು.
ಪಕ್ಷದ ಸಂವಿಧಾನ ಮತ್ತು ನಿಯಮಗಳಿಗೆ ಅನುಗುಣವಾಗಿ ಪ್ರಾಥಮಿಕ, ಬ್ಲಾಕ್, ಜಿಲ್ಲಾಮಟ್ಟದ ಚುನಾವಣೆಗಳನ್ನು ನಡೆಸಿ ಫಲಿತಾಂಶ ಕಳುಹಿಸಿಕೊಡಬೇಕು. ಚುನಾವಣಾ ಆಯೋಗಕ್ಕೆ ಫಲಿತಾಂಶವನ್ನು ಸಲ್ಲಿಸಬೇಕಿರುವ ಕಾರಣ ಯಾವುದೇ ಕಾರಣಕ್ಕೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಎಚ್.ಸಿ.ನೀರಾವರಿ ತಿಳಿಸಿದ್ದಾರೆ.
ಇದನ್ನೂ ಓದಿ: ಏನ್ ಗಟ್ಟಿರೀ ಈಕೆ.. ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್ ತುಳಿಯುವ ಅಜ್ಜಿ!