ಬೆಂಗಳೂರು: ಇಸ್ರೇಲ್ ದೇಶದ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಉನ್ನತ ನಿಯೋಗವು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ನವೋದ್ಯಮ ಕಾರ್ಯ ಪರಿಸರ ಕುರಿತು ಚರ್ಚೆ ನಡೆಸಿದೆ. ಬುಧವಾರ ವಿಕಾಸಸೌಧದಲ್ಲಿ ನಡೆದ ಭೇಟಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿರುವ ಐಟಿ, ಬಿಟಿ, ಸ್ಟಾರ್ಟಪ್ ಮತ್ತು ರಕ್ಷಣಾ ಸಂಶೋಧನೆ ಹಾಗೂ ತಂತ್ರಜ್ಞಾನದ ಕುರಿತು ಹಲವು ವಿಚಾರಗಳನ್ನು ಇಸ್ರೇಲ್ ನ ನಿಯೋಗದೊಂದಿಗೆ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು, ಇತ್ತೀಚೆಗೆ ಹೈಬ್ರಿಡ್ ಮಾದರಿಯಲ್ಲಿ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಇಸ್ರೇಲಿನ ಪ್ರಧಾನಿಗಳು ಮಾತನಾಡಿದ್ದನ್ನು ನೆನಪಿಸಿಕೊಂಡರು. ಇದೇ ವೇಳೆ ಇಸ್ರೇಲ್ ನಿಯೋಗದ ಸದಸ್ಯರು, ತಮ್ಮ ದೇಶದಲ್ಲಿರುವ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧಗಳು, ವಿಶ್ವಸಂಸ್ಥೆ, ಯೂರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೋ ಮುಂತಾದ ವಿಷಯಗಳನ್ನು ಕುರಿತು ಹೇಗೆ ಕಲಿಸಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ನವೋದ್ಯಮದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗವು, ರಾಜ್ಯಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡುವುದಾಗಿ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ ಅವರು, ರಾಜ್ಯದಲ್ಲಿ ನವೋದ್ಯಮವು ಶಕ್ತಿಶಾಲಿಯಾಗಿ ಬೆಳೆಯುತ್ತಿರುವುದನ್ನು ಇಲ್ಲಿನ 34ಕ್ಕೂ ಹೆಚ್ಚಿನ ಸ್ಟಾರ್ಟಪ್ ಕಂಪನಿಗಳು ಯೂನಿಕಾರ್ನ್ ಸ್ಥಾನಮಾನ ಹೊಂದಿರುವುದನ್ನು ಇಸ್ರೇಲ್ ನಿಯೋಗದ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ನಿಯೋಗದ ಪ್ರತಿನಿಧಿಗಳು ಮಾತನಾಡಿ, ಕಳೆದ 30 ವರ್ಷಗಳಿಂದ ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ರಾಜತಾಂತ್ರಿಕ ಬಾಂಧವ್ಯ ಮತ್ತು ರಕ್ಷಣಾ ಸಹಕಾರ ಹೇಗೆ ವೃದ್ಧಿಸಿಕೊಂಡು ಬಂದಿದೆ ಎನ್ನುವುದರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಸ್ರೇಲ್ ನಿಯೋಗದ ಕರ್ನಲ್ ಯೆಹೂದಾ ಯೋಹನಾನಾಫ್, ಕರ್ನಲ್ ಸ್ಯಾಮ್ಯುಯೆಲ್ ಬೌಮೆನ್ಡಿಲ್, ಅಲ್ಲಿನ ಪ್ರಧಾನಮಂತ್ರಿ ಕಚೇರಿಯ ಉನ್ನತಾಧಿಕಾರಿ ಶಾಯ್ ಜೊಂಟ್ಯಾಗ್, ಕಮಾಂಡರ್ ನಾವಾ ಬ್ಯಾರಿನಾ ಬೆನ್ ಸಹರ್, ಲೆ.ಕ. ಕೆಲ್ಲಿ ಬೊರುಕ್ ಹುವಿಚ್ ಮತ್ತು ಬಿಲ್ ವ್ಯಾಲೇಸ್, ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಶ್ರೀಮತಿ ಶರೋನ್ ರೆಜೆವ್, ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಅವಿ ಜುಬೈಯಾ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ಪರವಾಗಿ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಐಟಿ ಮತ್ತು ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಮುಂತಾದವರು ಉಪಸ್ಥಿತರಿದ್ದರು.
ಓದಿ : ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು ನಾನ್ ಕಾಗ್ನಿಸೆಬಲ್ ಪ್ರಕರಣ ತನಿಖೆ ಮಾಡುವಂತಿಲ್ಲ: ಹೈಕೋರ್ಟ್