ಬೆಂಗಳೂರು: ದಲಿತ ಒಳಮೀಸಲಾತಿ ವಿಚಾರವಾಗಿ ಎಡಗೈ ಹಾಗೂ ಬಲಗೈ ಪಂಗಡಗಳ ನಡುವಿನ ವೈಮನಸ್ಸು ಈಗಲೂ ಮುಂದುವರಿದಿದೆ ಎನ್ನುವುದು ಇಂದು ಮತ್ತೊಮ್ಮೆ ಸಾಬೀತಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಹುತೇಕ ನಾಯಕರ ಅನುಪಸ್ಥಿತಿಯು ಅಸಮಾಧಾನ ಈಗಲೂ ಇದೆ ಎನ್ನುವುದನ್ನು ಸಾಬೀತು ಪಡಿಸಿತು. ರಾಜ್ಯದ ಎಲ್ಲಾ ದಲಿತ ನಾಯಕರು ತಮಗೆ ಬೆಂಬಲ ನೀಡುತ್ತಾರೆ ಎಂಬ ಮುನಿಯಪ್ಪ ನಿರೀಕ್ಷೆ ಮತ್ತೊಮ್ಮೆ ಹುಸಿಯಾಯಿತು.
ಕೇವಲ ಎಡಗೈ ಬಣದ ಬೆರಳೆಣಿಕೆಯಷ್ಟು ನಾಯಕರ ಜೊತೆ ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ಮುಗಿಸುವ ಹೊತ್ತಿಗೆ, ದಲಿತ ಎಡಗೈ ಬಣದಲ್ಲಿಯೇ ಮುನಿಯಪ್ಪಗೆ ಬೆಂಬಲ ಸಿಗುತ್ತಿಲ್ಲ ಎಂಬ ಅನುಮಾನ ಕೂಡ ಮೂಡಿತ್ತು. ಸುದ್ದಿಗೋಷ್ಠಿಯಲ್ಲಿ ರಾಜ್ಯಸಭೆ ಸದಸ್ಯ ಹನುಮಂತಯ್ಯ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ರಾಜ್ಯಸಭೆ ಸದಸ್ಯ ಕೆ.ಬಿ. ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಳ್ಳಬೇಕಿತ್ತು. ಆದರೆ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಧರ್ಮಸೇನಾ ಮಾತ್ರ ಪಾಲ್ಗೊಂಡು ಮುನಿಯಪ್ಪ ಅವರ ಆಶಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಉಳಿದವರ ಅನುಪಸ್ಥಿತಿ ಕುರಿತು ಕೇಳಿದ ಪ್ರಶ್ನೆಗೂ ಮುನಿಯಪ್ಪರಿಂದ ಸಮರ್ಪಕ ಉತ್ತರ ಸಿಗಲಿಲ್ಲ. ದಲಿತರ ಎಡಗೈ ಹಾಗೂ ಬಲಗೈ ಬಣಗಳು ಒಂದಾಗಿದ್ದು, ಆದಷ್ಟು ಬೇಗ ನಾವು ಒಟ್ಟಾಗಿ ಸರ್ಕಾರಕ್ಕೆ ಒತ್ತಡ ಹೇರುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.