ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸಂಚಲನ ಸೃಷ್ಟಿಸಿದ್ದ ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ಸಾಲ ಪ್ರಕರಣಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಹೊಸ ಟ್ವಿಸ್ಟ್ ನೀಡಿದ್ದಾರೆ. ಮೈಸೂರಿನಲ್ಲಿ ಪ್ರಭಾವಿಗಳು, ಉದ್ಯಮಿಗಳು ಮತ್ತು ಸೆಲೆಬ್ರೆಟಿಗಳು ಜನ ಸಾಮಾನ್ಯರ ಮೇಲೆ ದೌರ್ಜನ್ಯ ನಡೆಸುತ್ತಿರುವಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಕೂಡ ಬರೆದಿದ್ದೇನೆ. ಈ ವಿಚಾರವಾಗಿ ನನ್ನ ಹತ್ತಿರ ಸಾಕಷ್ಟು ದಾಖಲೆಗಳಿವೆ ಎಂದಿದ್ದಾರೆ.
ಮೈಸೂರಿನ ಸಂದೇಶ ಹೊಟೇಲ್ನಲ್ಲಿ ನಟ ದರ್ಶನ್ ಕಡೆಯವರು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಮಯದಲ್ಲಿ ಪವಿತ್ರಾ ಗೌಡ, ರಾಕೇಶ್ ಶರ್ಮಾ, ಹರ್ಷ ಮೆಲೋಂಟಾ, ರಾಕೇಶ್ ಪಾಪಣ್ಣ ಇದ್ದರು. ಘಟನೆಯಾದ ಒಂದು ದಿನದ ನಂತರ ದಲಿತ ಯುವಕನಿಗೆ ದುಡ್ಡು ಕೊಟ್ಟು ಸುಮ್ಮನಿರಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಇದೇ ವೇಳೆ ದರ್ಶನ್ ಅವರಿಗೆ ಹಲವು ಪ್ರಶ್ನೆಗಳನ್ನ ಹಾಕಿರುವ ಇಂದ್ರಜಿತ್, ನಿಮ್ಮ ತೋಟಕ್ಕೆ ಅರುಣಾಕುಮಾರಿಯನ್ನ ಯಾಕೆ ಕರೆಸಿಕೊಂಡ್ರಿ?. 1 ಕೋಟಿ ರೂ. ಮೋಸ ಮಾಡಿದ್ರೆ, ನಾನ್ ಬೇಲೆಬಲ್ ವಾರೆಂಟ್ ಇರುತ್ತೆ. ಆದರೆ, ನೀವು 25 ಕೋಟಿ ರೂಪಾಯಿ ವಿಷಯಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾಕೆ. ದರ್ಶನ್ ರಾಘವೇಂದ್ರ ಸ್ವಾಮಿಗಳ ಭಕ್ತ ಅಲ್ವಾ, ಆ ದೇವರ ಮೇಲೆ ಆಣೆ ಮಾಡಿ ಹೇಳಲಿ. ಯಾರೇ ತಪ್ಪು ಮಾಡಿದ್ರೂ ತಲೆ ತೆಗಿತೀನಿ ಎಂದಿದ್ದ ನೀವು, ಹೇಗೆ ಒಪ್ಪಂದಕ್ಕೆ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನಾನು ಯಾರ ಪರವಿಲ್ಲ, ಆದ್ರೆ ಜನಸಾಮಾನ್ಯರ ಪರ ಇದ್ದೇನೆ. ಅಲ್ಲಿ ಮನಸ್ತಾಪಗಳು ನಡೆದಿವೆ. ಹಾಗಾದರೆ, ಪೊಲೀಸರು ಹಣ ಪಡೆದು ಸುಮ್ಮನಾದ್ರಾ ಅಂತಾ ಇಂದ್ರಜಿತ್ ಲಂಕೇಶ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನನ್ನ ಹತ್ತಿರ ದಾಖಲೆಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಭಾವಿಗಳ ದೌರ್ಜನ್ಯ ತಡೆಯವಲ್ಲಿ ಪೊಲೀಸರು ವಿಫಲ: ಕ್ರಮಕ್ಕಾಗಿ ಗೃಹ ಸಚಿವರಿಗೆ ಇಂದ್ರಜಿತ್ ಲಂಕೇಶ್ ಪತ್ರ