ಬೆಂಗಳೂರು : ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಸಂಖ್ಯೆಗಳಲ್ಲಿ ಬಹುಪಾಲು ಯುವಕರೇ ಪ್ರಮುಖ ಪಾತ್ರ ವಹಿಸುತ್ತಿರುವುದು ಅತ್ಯಂತ ದುರಂತ ಸಂಗತಿ. ಅಪರಾಧ ಕೃತ್ಯಗಳ ತಡೆಗೆ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಅವುಗಳಿಗೆ ಬಲ ತುಂಬುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ ಎಂಬುದಕ್ಕೆ ಆಯಾ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳೇ ಸಾಕ್ಷಿ.
ಕಠಿಣ ಕಾನೂನುಗಳ ಅರಿವಿದ್ದರೂ ಯುವಕರು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ, ಮಹಿಳೆಯರಿಗೆ ತೊಂದರೆ, ಸೈಬರ್ ಕ್ರೈಂ, ಸರಗಳ್ಳತನ, ಡಕಾಯಿತಿ, ಅತ್ಯಾಚಾರ ಹೀಗೆ ವಿವಿಧ ಕೃತ್ಯಗಳಲ್ಲಿ ಭಾಗಿಯಾದ ಯುವಜನಾಂಗದ ಪಟ್ಟಿ ಬಹಳ ದೊಡ್ಡದಿದೆ.
ಬಹಳಷ್ಟು ಯುವಕರು ಉದ್ಯೋಗ ಸಿಗದೆ ಖಿನ್ನತೆಗೆ ಒಳಗಾಗಿದ್ದು, ಹಣ ಸಂಪಾದನೆಗಾಗಿ ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಇನ್ನು, ಕೆಲವರು ಶೋಕಿ, ಹೆಸರು, ಜನಪ್ರಿಯತೆಗಾಗಿ ಅಪರಾಧ ಲೋಕಕ್ಕೆ ಪ್ರವೇಶ ಮಾಡುತ್ತಾರೆ. ಸಣ್ಣ ಸಣ್ಣ ಪ್ರಕರಣಗಳಲ್ಲಿ ಯುವಕರು ಬಂಧನವಾದರೆ, ಅವರ ಪೋಷಕರನ್ನು ಕರೆಸಿ ಬುದ್ದಿವಾದ ಹೇಳುತ್ತಾರೆ. ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸುತ್ತಾರೆ. ಕೆಲವರು ಮನಃಪರಿವರ್ತನೆಯಾದರೆ, ಇನ್ನು ಕೆಲವರು ದೊಡ್ಡ ಕೃತ್ಯಗಳಿಗೆ ಕೈ ಹಾಕುತ್ತಾರೆ.
ಕರ್ನಾಟಕದ ಪ್ರಮುಖ ಜೈಲು ಪರಪ್ಪನ ಅಗ್ರಹಾರದಲ್ಲಿ ರಾಜಕೀಯ, ಸಿನಿಮಾ ರಂಗದವರು, ರೌಡಿ ಶೀಟರ್ಗಳು, ವಿದ್ಯಾರ್ಥಿಗಳು, ಉದ್ಯಮಿಗಳು ಜೈಲಿನಲ್ಲಿದ್ದಾರೆ. ಸದ್ಯ ಜೈಲಿನಲ್ಲಿ ಒಟ್ಟು 5,084 ಕೈದಿಗಳಿದ್ದಾರೆ (ಪುರುಷ ಹಾಗೂ ಮಹಿಳೆ). ಈ ಪೈಕಿ ಶಿಕ್ಷಣ ಜ್ಞಾನ ಹೊಂದಿದವರು ಎಷ್ಟು ಮಂದಿ ಇದ್ದಾರೆ ಎಂಬುದರ ಪಟ್ಟಿ ಈ ಮುಂದಿದೆ.
ಎಂಎ 6, ಪಿಜಿ 1, ಎಂಕಾಮ್ 2, ಎಂ.ಎಸ್ಸಿ 2, ಎಂ.ಟೆಕ್ 1, ಎಂಬಿಎ 7, ಬಿಕಾಂ 16, ಬಿ.ಇ 4, ಬಿ.ಎಸ್ಸಿ 6, ಬಿ.ಟೆಕ್ 2, ಬಿಎ 26, ಎಲ್ಎಲ್ಬಿ 3, ಬಿಬಿಎ 1, ಬಿಬಿಎಂ 3, ಬಿಎಸ್ಇ 1, ಪದವಿ 4, ಡಿಪ್ಲೋಮಾ 21, ಐಟಿಐ 6, ಶಿಕ್ಷಕರು 2, ಪಿಯುಸಿ 121, 8-10ನೇ ತರಗತಿ 378, 1-7ನೇ ತರಗತಿ 281. ಉಳಿದವರು ವಿಚಾರಣಾದೀನಾ ಕೈದಿಗಳು. ಜೈಲಿನಲ್ಲಿದ್ದುಕೊಂಡೇ 14 ಮಂದಿ ಪರೀಕ್ಷೆಗಾಗಿ ಕಟ್ಟಿದ್ದಾರೆ.
ಸೈಬರ್ ತಜ್ಞೆ ಶುಭ ಮಂಗಳ ಮಾತನಾಡಿ, ಕೊರೊನಾ ಬಳಿಕ ಯುವಕರೇ ಹೆಚ್ಚು ಸೈಬರ್ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಂದಕ್ಕೂ ಇಂಟರ್ನೆಟ್ ಮೇಲೆ ಅವಲಂಬಿತರಾಗಿದ್ದಾರೆ. ಕೊರೊನಾದಿಂದ ಕೆಲಸ ಕಳೆದುಕೊಂಡ ಎಷ್ಟೋ ಮಂದಿ ಅಡ್ಡ ದಾರಿ ಹಿಡಿದ್ದಾರೆ. ಸೈಬರ್ ಅಪರಾಧ ಮಾಡುವುದು ಹೇಗೆ ಎಂಬುದರ ಕುರಿತು ಯುವಕರೇ ಹೆಚ್ಚಾಗಿ ಅಂತರ್ಜಾಲದಲ್ಲಿ ಜಾಲಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಗಮನ ಹರಿಸಬೇಕಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್ ಮಾಲ್ಗತ್ತಿ ಮಾತನಾಡಿ, ಇಂಜಿನಿಯರಿಂಗ್ ಓದಿದವರು ಸರಗಳ್ಳತನ, ಡ್ರಗ್ ಹೀಗೆ ಅಡ್ಡದಾರಿ ಹಿಡಿದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರಭಾವವೂ ಯುವಕರ ಮೇಲೆ ಬಿದ್ದಿದೆ. ಈಚೆಗೆ ಡ್ರಗ್ ಪ್ರಕರಣಗಳು ಬಹಳ ಸದ್ದು ಮಾಡುತ್ತಿದೆ. ಅದರಲ್ಲಿ ಪ್ರಭಾವಿ ವ್ಯಕ್ತಿಗಳ ಮಕ್ಕಳೇ ಭಾಗಿಯಾಗಿದ್ದಾರೆ ಎಂಬುದು ತನಿಖೆ ಮೂಲಕ ಗೊತ್ತಾಗುತ್ತಿದೆ. ಇಂಟರ್ ನ್ಯಾಷನಲ್ ಶಾಲೆಗಳಲ್ಲಿ ಚಾಕೋಲೇಟ್ಗಳ ಮೂಲಕ ಡ್ರಗ್ ಸರಬರಾಜಾಗುತ್ತಿದೆ ಎಂದರು.