ಬೆಂಗಳೂರು: ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಇದ್ದರೆ ಉಸಿರಾಟದ ಸಮಸ್ಯೆಯಿರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಪಾಲಿಕೆ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದ್ದು, ಘಟಕ ಸ್ಥಾಪಸಿಲು ಮುಂದೆ ಬಂದ ಸಂಸ್ಥೆಗಳಿಗೆ ಧನ್ಯವಾದಗಳು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ದಕ್ಷಿಣ ವಲಯ ವಿವಿಪುರಂನ ಪೊಬ್ಬತ್ತಿ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಗೀವ್ ಇಂಡಿಯಾ ಮತ್ತು ಜ್ಹೆರೋಧ ಸಂಸ್ಥೆ ವತಿಯಿಂದ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದ್ದು, ಘಟಕವನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಉದ್ಘಾಟಿಸಿದರು. ಈ ವೇಳೆ, ವಲಯ ವಿಶೇಷ ಆಯುಕ್ತ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಸಂಸ್ಥೆಗಳು, ಎನ್ಜಿಒಗಳು, ದಾನಿಗಳು ಮುಂದೆ ಬಂದು ಕೋವಿಡ್ ವಿರುದ್ಧ ಹೋರಾಡಲು ಸಹಕರಿಸಿದ್ದಾರೆ. ಅದರಂತೆ ಇಂದು ವಿವಿಪುರಂ ಪೊಬ್ಬತ್ತಿ ಹೆರಿಗೆ ಆಸ್ಪತ್ರೆಯಲ್ಲಿ ಗೀವ್ ಇಂಡಿಯಾ ಮತ್ತು ಜ್ಹೆರೋಧ ಸಂಸ್ಥೆ ಸೇರಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದ್ದು, ಇದರಿಂದ ಸಾಕಷ್ಟು ಮಂದಿಗೆ ಸಹಕಾರಿಯಾಗಲಿದೆ. ನಗರದಲ್ಲಿ ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಉದ್ದೇಶದಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲು ಕ್ರಮವಹಿಸಲಾಗುತ್ತಿದೆ. ನಗರದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ಸಾಂಕ್ರಮಿಕ ರೋಗಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮೆಡಿಕಲ್ ಆಕ್ಸಿಜನ್ ಜನರೇಟರ್ನಿಂದ ಒಂದು ನಿಮಿಷಕ್ಕೆ 50 ಲೀಟರ್ ಆಮ್ಲಜಕ ಉತ್ಪಾದನೆಯಾಗಲಿದ್ದು, ಶೇ 93ರಷ್ಟು ಶುದ್ಧ ಆಮ್ಲಜನಕ ಲಭ್ಯವಾಗಲಿದೆ. ಪ್ರತಿನಿತ್ಯ 20 ಹಾಸಿಗೆಗೆ ಆಮ್ಲಜನಕ ವ್ಯವಸ್ಥೆ ಮಾಡಬಹುದಾಗಿದೆ. ಈ ಘಟಕಕ್ಕೆ ದಿನದ 24 ಗಂಟೆಯೂ ಆಕ್ಸಿಜನ್ ಉತ್ಪತ್ತಿ ಮಾಡುವ ಸಾಮರ್ಥ್ಯವಿದೆ ಎಂದು ಆಮ್ಲಜನಕ ಉತ್ಪಾದನಾ ಘಟಕ ಸಿಬ್ಬಂದಿ ಮಾಹಿತಿ ನೀಡಿದರು.