ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಕಂಪನಿ ಪರ ವರದಿ ನೀಡಲು ಲಂಚ ಪಡೆದಿದ್ದ ಆರೋಪದಡಿ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ವಿಜಯ್ ಶಂಕರ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.
ವಿಜಯ್ ಶಂಕರ್ ಹಾಗೂ ನಗರ ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ವಿರುದ್ದ ಪ್ರಕರಣ ದಾಖಲಾಗಿದೆ. ವಿಜಯ್ ಶಂಕರ್ ₹ 1.5 ಕೋಟಿ, ನಾಗರಾಜ್ ₹ 4 ಕೋಟಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ₹ 8 ಲಕ್ಷ ಮನ್ಸೂರ್ ಖಾನ್ನಿಂದ ಐಎಂಎ ಪರವಾಗಿ ವರದಿ ನೀಡಲು ಇಷ್ಟು ಹಣ ಪಡೆದಿದ್ದಾರೆ ಎಂಬ ಆರೋಪವಿದೆ.
ಶಿವಾಜಿನಗರದಲ್ಲಿ ಐಎಂಎ ಜ್ಯುವೆಲ್ಸ್ ಮಳಿಗೆ ಕಚೇರಿ ಪ್ರಾರಂಭಿಸಿದ್ದ ಮನ್ಸೂರ್, ಹಣದ ಆಸೆ ತೋರಿಸಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ. ಪ್ರಕರಣದಲ್ಲಿ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಲಂಚ ಪಡೆದಿರುವ ಸಂಗತಿಗಳು ಬಯಲಿಗೆ ಬಂದಿತ್ತು.
ತನ್ನ ವಂಚನೆ ಮುಂದುವರಿಸಲು ಹಾಗೂ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಲಂಚ ನೀಡಿದ್ದ ಐಎಂಎ ಮಾಲೀಕ ಕಿಕ್ ಬ್ಯಾಕ್ ನೀಡಿದ್ದ. ಈ ಪ್ರಕರಣದ ಬಗ್ಗೆ ಈಗಾಗಲೇ ಎರಡು ಬಾರಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದೆ.