ಬೆಂಗಳೂರು: ಕನ್ನಡ ಚಿತ್ರರಂಗದ ರಾಜರತ್ನ, ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಇಂದು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಮಣ್ಣಲ್ಲಿ ಮಣ್ಣಾದರು.
ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಮಾಧಿಯ ಸಮೀಪವೇ ಪುನೀತ್ ಅವರ ಅಂತ್ಯಕ್ರಿಯೆ ಮಾಡಲಾಯಿತು. ಈ ರಾಜಕುಮಾರನನ್ನ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ಪತ್ನಿ ಅಶ್ವಿನಿ ಹಾಗೂ ಮಕ್ಕಳಾದ ಧೃತಿ, ವಂದಿತಾ ಮತ್ತು ಇತರ ಕುಟುಂಬಸ್ಥರು, ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಇತರ ರಾಜಕಾರಣಿಗಳು, ಕನ್ನಡ ಚಲನಚಿತ್ರ ಗಣ್ಯರು, ಸ್ನೇಹಿತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು. ರಾಘವೇಂದ್ರ ರಾಜ್ಕುಮಾರ್ ಅವರ ಹಿರಿಯ ಮಗ ವಿನಯ್ ರಾಜ್ಕುಮಾರ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಇದನ್ನೂ ಓದಿ: 'ಕಂಬನಿದುಂಬಿ ಹೋದೆಯಾ ದೂರ..' ಯುವರತ್ನನಿಗೆ ಯಕ್ಷಗಾಯನ ನಮನ
ಅಂತ್ಯಕ್ರಿಯೆ ಮುಗಿಸಿ ಸದಾಶಿವನಗರದ ರಾಜ್ಕುಮಾರ್ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ನನ್ನ ಮಗುವನ್ನ ಕಳೆದುಕೊಂಡಿದ್ದೀನಿ. ನನಗಿಂತಲೂ ಕೋಟ್ಯಂತರ ಅಭಿಮಾನಿಗಳು ಅಪ್ಪುವನ್ನ ಕಳೆದುಕೊಂಡಿದ್ದಾರೆ. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ನಾನು ಚಿಕ್ಕ ಮಗುವಿಂದ ನೋಡಿದ ಮಗನನ್ನ ಕಳೆದುಕೊಂಡಿದ್ದೀನಿ ಅಂತಾ ಭಾವುಕರಾದರು.
ಅಪ್ಪುವಿನ ಅಂತ್ಯ ಸಂಸ್ಕಾರವನ್ನ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಇಲಾಖೆಗೆ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಶಿವರಾಜಕುಮಾರ್ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.