ಬೆಂಗಳೂರು: ಬಜೆಟ್ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇಲ್ಲ, ಸುಳ್ಳಿನ ಕಂತೆ ಮಂಡಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕಳೆದ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳನ್ನು ಮುಂದುವರೆಸಿದರೆ ಅದೇ ಸಾಕು, ಶಾಸಕರೆಲ್ಲರಿಗೂ ಅನುದಾನ ನೀಡುತ್ತಿಲ್ಲ, ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ. ಸದನದಲ್ಲಿ ನಮ್ಮ ಹೋರಾಟ ಹೇಗಿರಬೇಕು ಎಂಬ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಪಕ್ಷದಿಂದ ನಮ್ಮ ಶಾಸಕರು ದೂರಾಗುತ್ತಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಸಭೆ ಕರೆದಿದ್ದೇವೆ. ಮಾಜಿ ಸಚಿವ ಜಿ.ಟಿ.ದೇವೇಗೌಡರು ಪಕ್ಷದಿಂದ ಅಂತರ ಕಾಯ್ದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರೊಬ್ಬರನ್ನು ಬಿಟ್ಟು ಬೇರೆ ಯಾವ ಶಾಸಕರಿಗೂ ಅಸಮಾಧಾನ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಪಕ್ಷದ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸತ್ಯನಾರಾಯಣ, ಬಂಡೆಪ್ಪ ಕಾಶಂಪುರ್, ಎಂ.ಸಿ.ಮನಗೂಳಿ, ಟಿ.ಎ.ಶರವಣ, ತಮ್ಮಣ್ಣ, ವೆಂಕಟರಾವ್ ನಾಡಗೌಡ, ದೇವಾನಂದ ಚವ್ಹಾಣ್, ಶ್ರೀನಿವಾಸಗೌಡ, ಶಿವಲಿಂಗೇಗೌಡ, ಮಾಗಡಿ ಮಂಜುನಾಥ್, ಕೃಷ್ಣಾರೆಡ್ಡಿ, ಅಶ್ವಿನ್ ಕುಮಾರ್, ಬಸವರಾಜ ಹೊರಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.