ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರಿಗೂ ಸಮಾನವಾಗಿ ಶಾಸಕರ ನಿಧಿಯನ್ನು ಹಂಚಿಕೆ ಮಾಡುವ ಪದ್ದತಿ ಜಾರಿಯಲ್ಲಿದೆ. ಪ್ರತಿ ವರ್ಷ ಅವರವರು ಪ್ರತಿನಿಧಿಸುವ ಕ್ಷೇತ್ರಗಳ ಅಭಿವೃದ್ಧಿಗೆ ಈ ಹಣವನ್ನು ವ್ಯಯಿಸಬಹುದಾಗಿದೆ.
ವಿಧಾನಸಭೆಯ ಸಂಖ್ಯಾಬಲ 224, ಒಂದು ಆಂಗ್ಲೋ ಇಂಡಿಯನ್ ಸದಸ್ಯರ ನಾಮನಿರ್ದೇಶನ ಸೇರಿದರೆ 225 ಆಗಲಿದೆ. ವಿಧಾನ ಪರಿಷತ್ ಸದಸ್ಯ ಬಲ 75 ಒಟ್ಟು ಉಭಯ ಸದನಗಳ ಸದಸ್ಯರ ಸಂಖ್ಯೆ 300 ಆಗಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳು, ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರದ ವ್ಯಾಪ್ತಿ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನೂ ಇದು ಒಳಗೊಂಡಿದೆ. ಪ್ರತಿವರ್ಷ ಸಿಗಲಿರುವ ಶಾಸಕರ ನಿಧಿಯ ಮೊತ್ತ ಹಾಗು ಯಾವೆಲ್ಲಾ ಕೆಲಸಗಳಿಗೆ ಹಣ ಬಳಕೆ ಸಾಧ್ಯ ಎನ್ನುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಪ್ರತಿ ಶಾಸಕ ಹಾಗು ವಿಧಾನ ಪರಿಷತ್ ಸದಸ್ಯರಿಗೆ ಪ್ರತಿ ವರ್ಷ 2 ಕೋಟಿ ರೂ.ಗಳ ಹಣವನ್ನು ಶಾಸಕರ ನಿಧಿಯೆಂದು ನೀಡಲಾಗ್ತದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ನ 300 ಸದಸ್ಯರಿಗೆ ವರ್ಷಕ್ಕೆ 600 ಕೋಟಿ ಹಣ ಶಾಸಕರ ನಿಧಿಗೆ ನೀಡಲಾಗ್ತದೆ. ಈ ಹಣ ನೇರವಾಗಿ ಶಾಸಕರ ಖಾತೆಗಳಿಗೆ ತಲುಪುವುದಿಲ್ಲ. ಆಯಾ ಶಾಸಕರ ಕ್ಷೇತ್ರ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ನಾಲ್ಕು ಕಂತುಗಳಲ್ಲಿ ಹಣಕಾಸು ಇಲಾಖೆಯಿಂದ ಹಣ ಸಂದಾಯವಾಗಲಿದೆ. ಶಾಸಕರು ಅವರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಹಣ ಬಿಡುಗಡೆಯಾಗಲಿದೆ.
ರಾಜ್ಯದ ಹಣಕಾಸು ಸ್ಥಿತಿಗತಿ ಆಧಾರದಲ್ಲಿ ಶಾಸಕರ ನಿಧಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಬಿಡುಗಡೆಯಾಗುವ ಅನುದಾನದಲ್ಲಿ ಕ್ಷೇತ್ರಗಳ ಅಭಿವೃದ್ಧಿ ಮಾತ್ರ ಹೇಳಿಕೊಳ್ಳುವಷ್ಟು ಆಗಲ್ಲ. ಯಾಕಂದರೆ ರಾಜಕೀಯ ಕೆಸರೆರಚಾಟ ಅದಕ್ಕೆ ಕಾರಣ ಎನ್ನಲಾಗಿದೆ. ಕೆಲವೊಮ್ಮೆ ಸಕಾಲಕ್ಕೆ ಸರಿಯಾಗಿ ಪಾವತಿಯಾದರೆ ಕೆಲವೊಮ್ಮೆ ವಿಳಂಬವಾಗಿ ಸಂದಾಯವಾದ ಉದಾಹರಣೆಗಳೂ ಇವೆ.
2019-20ನೇ ಸಾಲಿನ ಶಾಸಕರ ನಿಧಿ ವಿವರ
ಕಳೆದ ವರ್ಷದ ಆರ್ಥಿಕ ವರ್ಷದಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 948.97 ಕೋಟಿ ರೂ. ಉಳಿದಿದ್ದು, ಅದಕ್ಕೆ 296.09 ಕೋಟಿ ಹಣವನ್ನು 2019-20ನೇ ಸಾಲಿಗೆ ಶಾಸಕರ ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು 1290.83 ಕೋಟಿ ಹಣದಲ್ಲಿ 618.94 ಕೋಟಿ ಹಣ ಮಾತ್ರ ಕಳೆದ ಸಾಲಿನಲ್ಲಿ ವೆಚ್ಚವಾಗಿದ್ದು, ಇನ್ನು ಡಿಸಿಗಳ ಪಿಡಿ ಖಾತೆಯಲ್ಲಿ 668.93 ಕೋಟಿ ಇದೆ. ಇದ್ದ ಹಣದಲ್ಲಿ ಅರ್ಧವನ್ನೂ ವೆಚ್ಚ ಮಾಡಲು ಸಾಧ್ಯವಾಗಿಲ್ಲ. ಶೇ.48ರಷ್ಟು ಹಣವನ್ನು ಮಾತ್ರ ವೆಚ್ಚ ಮಾಡಲಾಗಿದೆ. ಈ ಬಾರಿಯ ಆರ್ಥಿಕ ವರ್ಷ ಆರಂಭಗೊಂಡು ಐದು ತಿಂಗಳ ಕಳೆದಿದ್ದು, ಅದು ಪೂರ್ತಿ ಲಾಕ್ಡೌನ್ನಲ್ಲಿಯೇ ಕಾಲ ಕಳೆದಿದ್ದಾಗಿದೆ. ಸದ್ಯ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದ್ದು, ಅದನ್ನೇ ಈಗ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗಳ ಜಾರಿಗೆ ಬಳಸಿಕೊಳ್ಳಬಹುದಾಗಿದೆ. ಜೊತೆಗೆ ಈ ವರ್ಷದ ಕೋಟಾವನ್ನೂ ಡಿಸಿ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
2018ರ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳು ಕಳೆದಿವೆ. ಆದರೆ ಶಾಸಕರಿಗೆ ಪ್ರತಿ ವರ್ಷ ನೀಡುವ ವಿವೇಚನಾ ನಿಧಿ ಸರಿಯಾಗಿ ಬಳಕೆಯಾಗಿಲ್ಲ ಎನ್ನುವ ಆರೋಪವಿದೆ. ಹಲವು ಶಾಸಕರಿಗೆ ದೊರೆಯಬೇಕಾದ ನಿಧಿ ಸಹ ದೊರೆಯುತ್ತಿಲ್ಲ ಎನ್ನುವ ಕೊರಗು ಇದೆ. ಒಂದು ವೇಳೆ ಅನುದಾನ ಬಂದ್ರೆ ಅದನ್ನು ಪಡೆಯಲು ಶಾಸಕರು ತೊಂದರೆ ಅನುಭವಿಸುತ್ತಿದ್ದಾರೆ.
ಯಾವುದಕ್ಕೆಲ್ಲಾ ಶಾಸಕರ ಅನುದಾನ ಬಳಕೆ ಮಾಡಲಾಗುತ್ತದೆ?
ಸಮುದಾಯ ಭವನ ನಿರ್ಮಾಣ, ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ, ಗ್ರಾಮೀಣ ರಸ್ತೆ ನಿರ್ಮಾಣ ಮತ್ತು ದುರಸ್ತಿ, ಚರಂಡಿ ನಿರ್ಮಾಣ ಮತ್ತು ದುರಸ್ತಿ, ನಿರ್ವಹಣೆ, ತುರ್ತು ಕುಡಿಯುವ ನೀರು ಸರಬರಾಜು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಕಾಲೇಜು, ಅಂಗನವಾಡಿ ಕೊಠಡಿ ನಿರ್ಮಾಣ, ಜೀರ್ಣೋದ್ಧಾರ, ಬೀದಿ ವಿದ್ಯುತ್ ದೀಪ ಅಳವಡಿಕೆ, ಕಾಂಪೌಂಡ್ ಗೋಡೆ, ಗ್ರಂಥಾಲಯ, ಬಸ್ ತಂಗುದಾಣ ಮತ್ತು ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಬಹುದು.
ಸಚಿವರ ಮಾತು
ಸದ್ಯ ನಾಲ್ಕು ಕಂತುಗಳಲ್ಲಿ ಮೊದಲೇ ಕಂತು ಬಿಡುಗಡೆ ಮಾಡಲಾಗಿದೆ. ತಲಾ 50 ಲಕ್ಷ ರೂ.ಗಳ ಕಂತು ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಜಮೆಯಾಗಿದೆ. ಬಾಕಿ ಮೂರು ಕಂತನ್ನು ಹಂತ ಹಂತವಾಗಿ ಬಿಡುಗಡೆ ಆಗಲಿದೆ ಎಂದು ಈಟಿವಿ ಭಾರತಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಮಾಹಿತಿ ನೀಡಿದ್ದಾರೆ. ಲಾಕ್ಡೌನ್ ಎನ್ನುವ ಕಾರಣಕ್ಕೆ ಉದ್ದೇಶಿತ ಕಾರ್ಯ ಬಿಟ್ಟು ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಬೇರೆ ಉದ್ದೇಶಕ್ಕೆ ನೇರವಾಗಿ ಬಳಸಲು ಸಾಧ್ಯವಿಲ್ಲ. ಆದರೆ, ಪ್ರವಾಸೋದ್ಯಮ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಅವಕಾಶವಿದೆ. ಅದಕ್ಕೆ ಬಳಸಿಕೊಳ್ಳಬಹುದು ಎಂದರು.
ಇನ್ನು ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಬ್ಬರಿಗೂ ಸಮನಾಗಿ ಶಾಸಕರ ನಿಧಿಯನ್ನು ಹಂಚಿಕೆ ಮಾಡಲಾಗುತ್ತದೆ. ಲಾಕ್ಡೌನ್ ಕಾರಣದಿಂದ ಈ ಬಾರಿ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿದೆ. ಆರ್ಥಿಕ ಕೊರತೆ ವ್ಯವಸ್ಥೆ ಸರಿಯಾದ ನಂತರ ಸಿಎಂ ಶಾಸಕರ ನಿಧಿಗೆ ಹಣವನ್ನು ಬಿಡುಗಡೆ ಮಾಡಲಿದ್ದಾರೆ,ಎಲ್ಲವೂ ಸರಿಯಾಗಲಿದೆ ಎಂದರು.
ಕಳೆದ ಸಾಲಿನ ಹಣವನ್ನೇ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡದ ನಮ್ಮ ಜನಪ್ರತಿನಿಧಿಗಳು ಈ ವರ್ಷ ಲಾಕ್ಡೌನ್ ಸಂಕಷ್ಟದಿಂದ ನಲುಗುತ್ತಿರುವವರ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಶಾಸಕರ ಅನುದಾನವನ್ನು ಸ್ಥಳೀಯ ಕ್ಷೇತ್ರ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕು ಎನ್ನುವುದು ಜನತೆಯ ಬೇಡಿಕೆಯಾಗಿದೆ.