ಬೆಂಗಳೂರು : ತಾಲಿಬಾನ್ ಉಗ್ರರ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನ ದೇಶದ ಚಿತ್ರಣ ಸಂಪೂರ್ಣ ಬದಲಾಗಿದೆ. ರಾಜಧಾನಿ ಕಾಬುಲ್‌ನನ್ನು ಉಗ್ರರು ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನರು ಆತಂಕದಿಂದ ಜೀವ ಉಳಿಸಿಕೊಳ್ಳಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ.
ರೈಲು, ಬಸ್ ನಿಲ್ದಾಣಗಳಂತೆ ಏರ್‌ಪೋರ್ಟ್‌ನಲ್ಲಿ ವಿದೇಶಕ್ಕೆ ಹಾರುವ ವಿಮಾನಗಳ ಮುಂದೆ ಜಮಾಯಿಸಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ತನ್ನ ದೇಶದ ಹೀನಾಯ ಸ್ಥಿತಿ ಕಂಡು ಕರ್ನಾಟಕದಲ್ಲಿರುವ ಅಫ್ಘಾನ್ ಪ್ರಜೆಗಳು ನೋವು ತೋಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಅಧಿಕೃತವಾಗಿ 339 ಅಫ್ಘಾನ್ ಪ್ರಜೆಗಳು : ರಾಜ್ಯದಲ್ಲಿ ಅಧಿಕೃತವಾಗಿ 339 ಅಫ್ಘಾನ್ ಪ್ರಜೆಗಳಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 212 ಮಂದಿ ಇದ್ದಾರೆ. ವಿದ್ಯಾರ್ಥಿ ವೀಸಾದಡಿ 192 ವಿದ್ಯಾರ್ಥಿಗಳು ರಾಜ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 147 ಮಂದಿ ಬ್ಯುಸಿನೆಸ್, ಟೂರಿಸ್ಟ್ ವೀಸಾದಡಿ ರಾಜ್ಯದಲ್ಲಿ ವಾಸವಾಗಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಅನಧಿಕೃತವಾಗಿ 16 ಮಂದಿ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: "ಘನಿ ಆಳ್ವಿಕೆಗಿಂತ ತಾಲಿಬಾನ್ ಆಡಳಿತ ಉತ್ತಮವಾಗಿದೆ": ರಷ್ಯಾ ರಾಯಭಾರಿ
10ಕ್ಕೂ ಅಧಿಕ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಫ್ಘಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾತನಾಡಿದ ಕೆಲ ವಿದ್ಯಾರ್ಥಿಗಳು, ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ನೆರೆಯ ದೇಶಗಳು ಒಗ್ಗೂಡಬೇಕು. ಅಲ್ಲಿನ ಜನರು ಹಗಲು-ರಾತ್ರಿ ನರಳುತ್ತಿದ್ದಾರೆ.
ಪೋಷಕರು ಮತ್ತು ಸಂಬಂಧಿಕರು ಕಳೆದ 2 ದಿನಗಳಿಂದ ತಮ್ಮ ಮನೆಯಿಂದ ಹೊರಗೆ ಬಂದಿಲ್ಲ. ಮಹಿಳಾ ವಿದ್ಯಾರ್ಥಿಗಳು ತಮಗೆ ಕೆಲಸ ಮಾಡುವ ಮತ್ತು ಅಧ್ಯಯನ ಮಾಡುವ ಹಕ್ಕಿದೆ ಎಂದಿದ್ದಾರೆ. ಪಾಕಿಸ್ತಾನ ತಾಲಿಬಾನ್‌ಗೆ ಸಹಾಯ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಈಗ ಯುಎಸ್ ಕೂಡ ಅದನ್ನೇ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.