ಬೆಂಗಳೂರು: ಕುಂತ್ರು - ನಿಂತ್ರು ಇದೀಗ ಒಮಿಕ್ರಾನ್ ಭೀತಿ ಶುರುವಾಗಿದೆ. ಕೊರೊನಾ ಹೊಸ ಸೋಂಕಿನ ಪ್ರಮಾಣ ಕಡಿಮೆ ಆಯ್ತು, ಎರಡು ಡೋಸ್ ಲಸಿಕೆ ಕೆಲಸಕ್ಕೆ ಬಂತಪ್ಪಾ ಅಂತ ನಿಟ್ಟುಸಿರು ಬಿಡುವಾಗಲೇ, ಇದೀಗ ಒಮಿಕ್ರಾನ್ ಲಸಿಕೆಗೂ ಬಗ್ಗದೇ ಜನರನ್ನ ಅಟ್ಯಾಕ್ ಮಾಡ್ತಿದೆ. ಸದ್ಯ ರಾಜ್ಯದ ರಾಜಧಾನಿಯಲ್ಲೇ ಎರಡು ಡೋಸ್ ಲಸಿಕೆ ಪಡೆದಿದ್ದರೂ, ಸಹ ಒಮಿಕ್ರಾನ್ ಸೋಂಕು ಹರಡಿದೆ. ಹಾಗಾದರೆ, ಕೊರೊನಾ ಹೊಸ ತಳಿ ಎಷ್ಟು ಡೇಂಜರಸ್? 2 ಡೋಸ್ ಲಸಿಕೆ ಪಡೆದಿದ್ದರೂ ಹೆಮ್ಮಾರಿ ಒಮಿಕ್ರಾನ್ ಅಟ್ಯಾಕ್ ಮಾಡುತ್ತಾ? ಕೊರೊನಾ ಹೊಸ ತಳಿ ಬಗ್ಗೆ ಯಾಕಿಷ್ಟು ಆತಂಕ ಎಂಬ ಸಹಜ ಕುತೂಹಲದ ಪ್ರಶ್ನೆ ಕಾಡುತ್ತೆ.
ಲಸಿಕೆ ಪಡೆದ್ರೂ ಬಿಡಲ್ಲ ಈ ಹೆಮ್ಮಾರಿ : ಅಂದಹಾಗೇ, ಒಮಿಕ್ರಾನ್ ಹೊಸ ಕೋವಿಡ್ ತಳಿ ಅತ್ಯಂತ ವೇಗವಾಗಿ ಹರಡುತ್ತೆ ಅಂತ ತಜ್ಞರು ಹೇಳುತ್ತಿದ್ದಾರೆ. ಡೇಂಜರ್ ಡೆಲ್ಟಾಕ್ಕಿಂತ ಹತ್ತು ಪಟ್ಟು ಪ್ರಭಾವಶಾಲಿಯಾಗಿದ್ದು, ತುಂಬಾ ವೇಗವಾದ ಹರಡುವಿಕೆ ಶಕ್ತಿ ಹೊಂದಿದೆ. ಹೆಚ್ಚು ಸೋಂಕುಕಾರಕ ಲಕ್ಷಣ ಹೊಂದಿರುವ ಒಮಿಕ್ರಾನ್, 2 ಡೋಸ್ ಲಸಿಕೆ ಪಡೆದಿದ್ದರೂ ಅಟ್ಯಾಕ್ ಮಾಡುತ್ತೆ. ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೇ ಈ ವೈರಸ್ನ ಮೊದಲ ಟಾರ್ಗೆಟ್ ಆಗಿದೆ.
ಡೇಂಜರ್ ವೈರಸ್ ಆಗುವ ಸಾಧ್ಯತೆ : 2 ಡೋಸ್ ಲಸಿಕೆ ತೆಗೆದುಕೊಂಡಿದ್ದೀವಿ, ಏನು ಮಾಡೋಲ್ಲ ಅನ್ನೋ ಮನಸ್ಥಿತಿಯಿಂದ ಜನರು ಹೊರಬರಬೇಕಿದೆ. ಈ ಹಿಂದೆ ಎರಡು ಡೋಸ್ ಪಡೆದರೂ ಡೆಲ್ಟಾ ಸೋಂಕು ಹರಡಿತ್ತು. ಆದರೆ, ರೋಗದ ತೀವ್ರತೆಯಿಂದ ಬಚಾವ್ ಮಾಡಿತ್ತು. ಇದೀಗ ಈ ಒಮಿಕ್ರಾನ್ ಸೋಂಕು ಹರಡಿಸುವ ಶಕ್ತಿ ಇದ್ದು, ಹೆಚ್ಚಿನ ಸ್ಪೈಕ್ ಪ್ರೋಟೀನ್ ಮ್ಯುಟೇಶನ್ ಹೊಂದಿದೆ.
ತಜ್ಞರ ಪ್ರಕಾರ ಕೋವಿಡ್ ಒಮಿಕ್ರಾನ್ ತಳಿ ಲಸಿಕೆ ಹಾಗೂ ಚಿಕಿತ್ಸೆ ಇತ್ಯಾದಿಗಳಿಗೆ ಪರಿಣಾಕಾರಿ ಪ್ರತಿಕ್ರಿಯೆ ನೀಡಿಲ್ಲ ಅಂತ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಈ ವೈರಸ್ ಹೆಚ್ಚು ಮುಟೇಶನ್ ಆದರೆ ಹರಡುವಿಕೆ ತುಂಬಾ ಡೇಂಜರ್ ಹಂತಕ್ಕೆ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಮಿಕ್ರಾನ್ ಬಗ್ಗೆ ವೈದ್ಯರ ಸಲಹೆ : ಈ ಕುರಿತು ಸ್ಪೆಷಲಿಸ್ಟ್ ಆಸ್ಪತ್ರೆಯ ಮಧುಮೇಹ ತಜ್ಞರಾದ ಡಾ. ಎನ್ ಜಿ ಕಾಂಚನ್ ಮಾತಾನಾಡಿದ್ದು, ಕೋವಿಡ್ ಬಂದು ಎರಡು ವರ್ಷ ಆಗಿದ್ದು ದಿನಕ್ಕೊಂದು ಹೊಸ ರೂಪಾಂತರ ಪಡೆದುಕೊಳ್ತಿದೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಒಮಿಕ್ರಾನ್ ವೈರಸ್ 23 ದೇಶದಲ್ಲಿ ಬಹುಬೇಗ ಹರಡಿದ್ದು, ಕರ್ನಾಟಕದಲ್ಲೂ ಪತ್ತೆಯಾಗಿದೆ. ಒಮಿಕ್ರಾನ್ ವೈರಸ್ ಕೋವಿಡ್ನ ಲಕ್ಷಣಗಳನ್ನೇ ಹೊಂದಿದ್ದು, ಇದರ ವಿಶೇಷತೆಯೇ ಬಹುಬೇಗ ಹರಡುವ ಗುಣ ಹೊಂದಿದೆ ಎಂದು ವಿವರಿಸಿದರು.
ಆದರೆ, ಒಂದು ನೆಮ್ಮದಿ ವಿಷ್ಯ ಅಂದರೆ ಒಮಿಕ್ರಾನ್ ನಿಂದ ಪ್ರಾಣಕ್ಕೆ ಅಪಾಯವಾಗುವಂತಹ ಹಾಗೂ ರೋಗ ತೀವ್ರತೆ ಹೆಚ್ಚು ಕಂಡು ಬಂದಿಲ್ಲ. ರೋಗ ತೀವ್ರತೆ ಕಡಿಮೆ ಇರಲಿದ್ದು ಸಾಮಾನ್ಯ ಫ್ಲೂ ರೀತಿಯ ಕೆಮ್ಮು, ಕಫ, ಜ್ವರದಂತಹ ರೋಗ ಲಕ್ಷಣಗಳನ್ನು ಹೊಂದಿದೆ ಅಂತ ತಿಳಿಸಿದರು.
ಚಿಕಿತ್ಸೆ ಏನು..? : ಇನ್ನು ವೈರಸ್ಗೆ ರಾಮಬಾಣವಾಗಿರುವ ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ ವ್ಯಾಕ್ಸಿನ್ ನಿಂದ ಹೊಸ ತಳಿಯಿಂದ ರಕ್ಷಣೆ ಸಿಗುತ್ತಾ ಎನ್ನುವ ಕುರಿತು ಪ್ರತಿಕ್ರಿಯಿಸಿದ ವೈದ್ಯರು, ಲಸಿಕೆಯು ನಮ್ಮನ್ನ ರಕ್ಷಣೆ ಮಾಡುತ್ತೆ. ಎರಡು ಡೋಸ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್ ಸೋಂಕು ಕಾಡಬಹುದು. ಹಾಗಂತ ಭಯ ಪಡುವ ಅಗತ್ಯವಿಲ್ಲ. ಯಾಕೆಂದರೆ ವ್ಯಾಕ್ಸಿನ್ ತೆಗೆದುಕೊಂಡಿರುವ ಕಾರಣಕ್ಕೆ ವೈರಸ್ ಪರಿಣಾಮ ಬಹಳ ಕಡಿಮೆ ಇರಲಿದೆ ಅಂತ ತಿಳಿಸಿದ್ದಾರೆ. ವ್ಯಾಕ್ಸಿನೇಷನ್ ಆಗಿದ್ದರೂ ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.