ಬೆಂಗಳೂರು: ಹೊಂಗಸಂದ್ರ ವಾರ್ಡ್ನಲ್ಲಿದ್ದ ವಲಸೆ ಕಾರ್ಮಿಕರ ಕ್ವಾರಂಟೈನ್ ಅವಧಿ ಮುಗಿದಿದೆ. ಜೊತೆಗೆ 132 ಜನಕ್ಕೆ ನೆಗೆಟಿವ್ ರಿಪೋರ್ಟ್ ಬಂದಿರುವುದರಿಂದ ಕ್ವಾರಂಟೈನ್ ಮುಕ್ತ ಮಾಡಿ ಊರಿಗೆ ಕಳಿಸಿಕೊಡಲು ಒತ್ತಾಯಿಸುತ್ತಿದ್ದಾರೆ.
ಈಗಾಗಲೇ ಸೇವಾ ಸಿಂಧು ವೆಬ್ಸೈಟ್ನಲ್ಲಿ ಊರಿಗೆ ಹೋಗಲು ಹೆಸರು ನೋಂದಾಯಿಸಲಾಗಿದೆ. ಒಂದು ಟ್ರೈನ್ನಲ್ಲಿ ಅವಕಾಶ ಸಿಗದ ಕಾರಣ ಇನ್ನೆರಡು ದಿನಗಳಲ್ಲಿ ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.
ಕ್ವಾರಂಟೈನ್ಗೆ ಒಪ್ಪದಿದ್ದರೆ ಕಾನೂನು ರೀತಿ ಕ್ರಮ ಜಾರಿ:
ದೆಹಲಿಯಿಂದ ಬೆಂಗಳೂರಿಗೆ ಬಂದ ರೈಲಿನ ಪ್ರಯಾಣಿಕರನ್ನು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹೋಟೆಲ್ ಕ್ವಾರಂಟೈನ್ ಮಾಡಲಾಗಿದೆ. ಆದರೆ ಕೆಲವು ಜನ ಈ ಮಾಹಿತಿ ಮೊದಲೇ ಇರಲಿಲ್ಲವೆಂದು ಕ್ವಾರಂಟೈನ್ಗೆ ಒಪ್ಪದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಅವರ ಸಾಮಾಜಿಕ ಕಳಕಳಿ ಎತ್ತಿತೋರಿಸ್ತದೆ.
ಮನೆಗೆ ಹೋಗುವ ಆತುರದಲ್ಲಿ ಸಮಾಜದ ಹಿತ ಕಾಯದೆ ಇಡೀ ಬೆಂಗಳೂರನ್ನು ಸಮಸ್ಯೆಗೆ ಒಡ್ಡುವ ರೀತಿ ಖಂಡನೀಯ ಎಂದು ಆಯುಕ್ತರು ಹೇಳಿದರು. ಕ್ವಾರಂಟೈನ್ಗೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದರೆ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಸಿದರು.