ಕೊರೊನಾ ಬಾದಿತ ಕುಟುಂಬಕ್ಕೆ ನಿಂದನೆ ಆರೋಪ : ವ್ಯಕ್ತಿ ನೇಣಿಗೆ ಶರಣು - ಬೆಂಗಳೂರು ಅಪರಾಧ ಸುದ್ದಿ
ಮಗನಿಗೆ ಸೋಂಕು ತಗುಲಿದ ಹಿನ್ನೆಲೆ ಆತನ ತಂದೆಗೆ ಪಕ್ಕದ ಮನೆಯ ನಗರಸಭಾ ಅಧ್ಯಕ್ಷನ ಕುಟುಂಬಸ್ಥರು ನಿಂದಿಸಿದ ಕಾರಣ ಮನನೊಂದ ಆತ್ಮಹತ್ಯೆಗೆ ಶರಣಾದ ಅಮಾನವೀಯ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
![ಕೊರೊನಾ ಬಾದಿತ ಕುಟುಂಬಕ್ಕೆ ನಿಂದನೆ ಆರೋಪ : ವ್ಯಕ್ತಿ ನೇಣಿಗೆ ಶರಣು home-quarantine-commit-suicide](https://etvbharatimages.akamaized.net/etvbharat/prod-images/768-512-8117757-thumbnail-3x2-ddd.jpg?imwidth=3840)
ದೊಡ್ಡಬಳ್ಳಾಪುರ : ಹೋಮ್ ಕ್ವಾರಂಟೈನ್ನಲ್ಲಿದ್ದ ಕೊರೊನಾ ಸೋಂಕಿತನ ತಂದೆಗೆ ಮಾಜಿ ನಗರಸಭಾ ಅಧ್ಯಕ್ಷನ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದರಿಂದ ಮನನೊಂದ ಸಾವಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಸವ ಭವನ ಹಿಂಭಾಗದಲ್ಲಿ ವಾಸವಾಗಿದ್ದ ವ್ಯಕ್ತಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದ ಹಿನ್ನೆಲೆ ಅವರನ್ನ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಅವರ ಆರೋಗ್ಯ ನೋಡಿ ಕೋಳ್ಳಲು ಅವರ ತಂದೆ ನಾಗರಾಜ್ ಹಾಗೂ ತಾಯಿ ಬಂದಿದ್ದರು. ಕೆಲ ದಿನಗಳ ನಂತರ ಸೋಂಕು ತಗುಲಿರುವುದು ಖಚಿತವಾದ ಹಿನ್ನೆಲೆ ದೊಡ್ಡ ಬಳ್ಳಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇತ್ತ ಮಗನಿಗೆ ಕೊರೊನಾ ಸೋಂಕು ತಗುಲಿದ ಕಾರಣ ತಂದೆಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು,. ಆದ್ರೆ ಇವರ ಪಕ್ಕದ ಮನೆಯಲ್ಲಿದ್ದ ನಗರಸಭಾ ಮಾಜಿ ಅಧ್ಯಕ್ಷ ಮುದ್ದಪ್ಪನ ಅಣ್ಣ ಹುನಮಂತರಾಯಪ್ಪ ‘ಎಲ್ಲರಿಗೂ ಕೊರೊನಾ ಸೋಂಕು ಹರಡಿಸುತ್ತಿರಾ. ಇಲ್ಲಿಂದ ತೊಲಗಿ’ ಎಂದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ.
ಇದರಿಂದ ಮನನೊಂದ ನಾಗರಾಜ್ ತಮ್ಮ ಮಗಳಿಗೆ ದೂರ ಹೋಗುತ್ತಿರುವುದಾಗಿ ಕರೆ ಮಾಡಿ ಹೇಳಿ ಹೋಗಿದ್ದಾರೆ. ಕೊನೆಗೆ ಎರಡು ದಿನ ಅವರು ಪತ್ತೆಯಾಗದ ಕಾರಣ ಕುಟುಂಬಸ್ಥರು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಎರಡು ದಿನಗಳ ನಂತರ ಹೆಸರುಘಟ್ಟ ಕೆರೆಯ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕುಟುಂಬಸ್ಥರ ಆರೋಪ ಎನು?
ಹನುಮಂತರಾಯಪ್ಪ ನಮ್ಮ ತಂದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಪ್ರತಿದಿನ ರೇಷನ್ ತರಲು ಹೊರಗೆ ಹೋದಾಗ, ಇಲ್ಲಿನ ಜನರಿಗೆ ರೋಗ ಅಂಟಿಸ್ತಿರಾ ಎಂದು ಬೈದಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಹೋಮ್ ಕ್ಯಾರಂಟೈನ್ನಲ್ಲಿದ್ದ ಕುಟುಂಬಕ್ಕೆ ಪೋನ್ ಮಾಡಿ ಬೈದಿದ್ದರು. ಇದರಿಂದ ಮನನೊಂದ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ತಂದೆ ಸಾವಿಗೆ ಹನುಮಂತರಾಯಪ್ಪ ಕಾರಣ ಎಂದು ಮೃತ ನಾಗರಾಜ ಅವರ ಮಕ್ಕಳು ಆರೋಪ ಮಾಡಿದ್ದಾರೆ.
ಸದ್ಯ ಸೊಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ನಾಗರಾಜ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಹನುಮಂತರಾಯಪ್ಪ ಹೇಳುವುದೇ ಬೇರೆ..
ಬುದ್ದಿವಾದ ಹೇಳಿದ್ದೆ, ಈ ಮಾತಿಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರ ಆರೋಪವನ್ನು ತಿರಸ್ಕರಿಸಿದ್ದಾರೆ.