ಬೆಂಗಳೂರು: ಆಮಿಷವೊಡ್ಡಿ ಮತಾಂತರ ಮಾಡುವುದು ಅಪಾರಾಧವಾಗಿದ್ದು, ಈ ಬಗ್ಗೆ ಕಠಿಣ ಕಾನೂನು ತರಲು ಚಿಂತಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆ ಕಲಾಪದಲ್ಲಿಂದು ತಿಳಿಸಿದರು.
ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿಷಯ ಪ್ರಸ್ತಾಪಿಸುತ್ತಾ, ಮತಾಂತರ ಅತ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ನನ್ನ ಕ್ಷೇತ್ರದಲ್ಲಿ 10,000-20,000 ಜನ ಮತಾಂತರ ಆಗಿದ್ದಾರೆ. ನನ್ನ ಹೆತ್ತ ತಾಯಿಯನ್ನೂ ಮತಾಂತರ ಮಾಡಲಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಅಮಾಯಕರನ್ನು ಕರೆದೊಯ್ದು ಬ್ರೇನ್ವಾಶ್ ಮಾಡಿಸುತ್ತಾರೆ. ನನ್ನ ತಾಯಿಯನ್ನು ಹಾಗೇ ಮಾಡಿದ್ದಾರೆ. ತಾಯಿಯ ಮೊಬೈಲ್ ರಿಂಗ್ ಟೋನ್ ಬದಲಾಗಿ ಕ್ರಿಶ್ಚಿಯನ್ ಪದ ಹಾಕುತ್ತಾರೆ. ನಮ್ಮ ಮನೆಯಲ್ಲಿ ಪೂಜೆ ಮಾಡಲು ಆಗುತ್ತಿಲ್ಲ. ಇದರಿಂದ ತುಂಬಾ ಮುಜುಗರ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತರು, ಹಿಂದುಳಿದ ವರ್ಗ, ಮುಸ್ಲಿಂರನ್ನೂ ಮತಾಂತರ ಮಾಡಲಾಗುತ್ತಿದೆ. ಇದೊಂದು ದೊಡ್ಡ ಪಿಡುಗಾಗಿದೆ. ಚರ್ಚ್‌ನವರು ಸುಳ್ಳು ರೇಪ್ ಕೇಸ್, ಅಟ್ರಾಸಿಟಿ ಕೇಸ್ ಹಾಕುತ್ತಾರೆ. ಯಾರೂ ಬೇಕಾದರೂ ಮತಾಂತರ ಆಗಿ ಹೋಗಲಿ. ಆದರೆ ಹೋಗುವ ವೇಳೆ ಎಸ್‌ಸಿ, ಎಸ್‌ಟಿಯವರಿಗೆ ಸಿಗುವ ಮೀಸಲಾತಿ ಹಕ್ಕನ್ನು ಬಿಟ್ಟು ಕೊಟ್ಟು ಹೋಗಲಿ. ಈ ಸಂಬಂಧ ಕಠಿಣ ಕಾನೂನು ಕ್ರಮ ತರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಶಾಸಕ ಬೋಪಯ್ಯ ಕೂಡ ದನಿಗೂಡಿಸಿದರು. ಈ ಸಂಬಂಧ ಯುಪಿ ಮಾದರಿಯಲ್ಲಿ ಕಾನೂನು ತರಬೇಕು ಎಂದು ಆಗ್ರಹಿಸಿದರು. ಈ ವೇಳೆ ಸ್ಪೀಕರ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ಗೃಹ ಸಚಿವರಿದ್ದಾಗ ನಾನೂ ಈ ಬಗ್ಗೆ ಮಾತನಾಡಿದ್ದೆ. ಬೇರೆ ರಾಜ್ಯದಲ್ಲಿ ಮತಾಂತರದ ಬಗ್ಗೆ ಕಾನೂನು ಇದೆ. ನಮ್ಮ ರಾಜ್ಯದಲ್ಲೂ ಕಾನೂನು ತಂದರೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇದು ಸರ್ಕಾರದ ಗಮನದಲ್ಲೂ ಇದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ. ಈ ಸಂಬಂಧ ಮಸೂದೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆಮಿಷವೊಡ್ಡಿ ಮತಾಂತರ ಮಾಡುವುದು ಯಾರಿಗೂ ಶೋಭೆ ತರಲ್ಲ. ರೋಗ ನಿವಾರಣೆಯಾಗುತ್ತದೆ ಎಂದು ಹೇಳಿ ದುರುಪಯೋಗ ಮಾಡಿ ಮತಾಂತರಗೊಳಿಸಿ ಜನಾಂಗವನ್ನು ಪರಿವರ್ತನೆ ಮಾಡುವುದು ಅಪರಾಧ ಎಂದು ಹೇಳಿದರು.
ಮತಾಂತರಿಂದ ಶಾಂತಿ ಭಂಗವಾಗುತ್ತದೆ. ಕಾನೂನು ರೀತಿಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಸುಳ್ಳು ರೇಪ್ ಕೇಸ್, ಅಟ್ರಾಸಿಟಿ ಕೇಸ್ ಹಾಕಿದರೆ ಅಂಥ ಪೊಲೀಸ್ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಕೆ.ಜೆ. ಜಾರ್ಜ್, ಚರ್ಚ್ ನವರು ರೇಪ್ ಕೇಸ್ ಹಾಕಿಸುತ್ತಾರೆ ಎಂಬ ಪದ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ಚರ್ಚ್‌ಗಳನ್ನು ಜನರಲೈಸ್ ಮಾಡುವುದು ಬೇಡ ಎಂದು ಮನವಿ ಮಾಡಿದರು.