ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿದ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕಕ್ಕೆ ಎಫ್‌ಬಿಐ ಅಧಿಕಾರಿಗಳು ಬಂದಿಲ್ಲ. ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಎಫ್‌ಬಿಐ ಸಂಸ್ಥೆ ಬಂದಿಲ್ಲ. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಕಾಂಗ್ರೆಸ್ ಅವರಿಗೂ ಗೊತ್ತಿದೆ. ಅಲ್ಲಿಂದಲೇ ತನಿಖೆ ಶುರುವಾಗಬಹುದು. ಕಾಂಗ್ರೆಸ್ ಅವರಿಗೆ ಯಾವುದೇ ಇಶ್ಯೂ ಇಲ್ಲ. ಜನರ ಮನಸ್ಸನ್ನು ಡೈವರ್ಟ್ ಮಾಡುವ ಪ್ರಯತ್ನ ಇದು. ನಿರಾಧಾರ ಆರೋಪ ಮಾಡ್ತಿದ್ದಾರೆ. ಸರ್ಕಾರವನ್ನು ಡಿಫೇಮ್ ಮಾಡ್ತಿದ್ದಾರೆ. ಚುನಾವಣೆ ಬರ್ತಿದೆಯಲ್ಲ, ಹೀಗಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದ್ದಾರೆ. ಜನರಿಗೆ ಎಲ್ಲವೂ ಗೊತ್ತಿದೆ. ಕೇಂದ್ರ ಸಂಸ್ಥೆಗಳು ರಾಜ್ಯಕ್ಕೆ ಬರಬಹುದು. ಸರ್ಕಾರದ ಅನುಮತಿ ಬೇಕಿಲ್ಲ ಎಂದರು.
ಶಾಲೆಗಳಿಗೆ ಬಾಂಬ್ ಬೆದರಿಕೆ ವಿಚಾರವಾಗಿ ಮಾತನಾಡಿದ ಸಚಿವರು, ನಿನ್ನೆ ಬಾಂಬ್ ಕರೆ ಮಾಡಿದ್ದಾರೆ. ಸೆಂಟ್ರಲ್ ಏಜೆನ್ಸಿ ಗಂಭೀರವಾಗಿ ತನಿಖೆ ಮಾಡ್ತಿದೆ. ಅಲ್ ಖೈದಾ ಉಗ್ರ ವಿಡಿಯೋ ಬಿಡುಗಡೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನ ತೆಗೆದುಕೊಳ್ಳುತ್ತೇವೆ. ನಮ್ಮ ಮಂಡ್ಯದ ಹೆಣ್ಣು ಮಗಳ ಬಗ್ಗೆ ಎಲ್ಲಿಂದಲೋ ವಿಡಿಯೋ ಮಾಡಿ ಆತ ಕಳಿಸುತ್ತಾನೆ. ಈ ಪ್ರಕರಣವನ್ನ ದೇಶದ ಐಕ್ಯತೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಗೃಹ ಸಚಿವರು ಹೇಳಿದರು.
ಮುಳಬಾಗಿಲಿನಲ್ಲಿ ಶೋಭಾಯಾತ್ರೆ ನಡೆಯುವಾಗ ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶೋಭಾಯಾತ್ರೆ ಮಾಡುವಾಗ ಕರೆಂಟ್ ಹೋಗಿದೆ. ಆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಓದಿ: ಶ್ರೀರಾಮನ ಶೋಭಾಯಾತ್ರೆ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು.. ಬೂದಿ ಮುಚ್ಚಿದ ಕೆಂಡದಂತಾಯ್ತು ಕೋಲಾರ
ಪರಪ್ಪನ ಅಗ್ರಹಾರದಲ್ಲಿ ಆರೋಪಿ ಅಕೌಂಟ್ ಇಂದ ಹಣ ಪಡೆದ ಆರೋಪ ಸಂಬಂಧ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಹಣದ ವ್ಯವಹಾರ ಮತ್ತು ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಈಗಾಗಲೇ ಹಲವು ಪ್ರಕರಣದಲ್ಲಿ ಕ್ರಮ ಕೈಗೊಂಡಿದ್ದೇವೆ. ಇದರಲ್ಲೂ ಸಹ ನಾನು ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳಿಂದ ದುಡ್ಡು ತಗೊಂಡು ಬಿಡುವುದು ತಪ್ಪು. ಅಂತಹ ಅಧಿಕಾರಿಗಳನ್ನ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಬಹಳ ದಿನಗಳಿಂದ ಇದು ನಡೆಯುತ್ತಿದೆ. ಜಾಮೀನು ತಂದ್ರು ಹಣದ ಬೇಡಿಕೆ ಇಡುತ್ತಾರೆ. ಆರೋಪಿಗಳು ಹಲವು ಬಾರಿ ಇದರ ಬಗ್ಗೆ ಮಾತನಾಡಿದ್ದಾರೆ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿತ್ತು. ಈಗ ಸ್ವಲ್ಪ ಕಡಿಮೆ ಆಗಿದೆ. ಮತ್ತೆ ಸುದ್ದಿ ಆಗಿದೆ. ಇದನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ಕಾಂಗ್ರೆಸ್ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಮರ್ಜೆನ್ಸಿ ಕಾಲದಲ್ಲಿ ನಮ್ಮನ್ನ ಜೈಲಿನಲ್ಲಿ ಇಟ್ಟಿದ್ರು. ಜಾರ್ಜ್ ಫರ್ನಾಂಡೀಸ್ ವಾಜಪೇಯಿ ಸೇರಿದಂತೆ ದೇಶವನ್ನೆ ಜೈಲಿನಲ್ಲಿ ಇಟ್ಟಿದ್ರು. ಈಗ ಅವರ ಕೈಯಲ್ಲಿ ಏನು ಇಲ್ಲ. ಹೀಗಾಗಿ ಬರೀ ದೂರು ಕೊಡ್ತಿದ್ದಾರೆ. ಕೊಡಲಿ ಬೇಕಾದ್ರೆ ಕಾನೂನು ಪ್ರಕಾರ ಕ್ರಮ ಆಗಲಿ ಎಂದರು.